ಮುಂಬೈ: ಜಿಯೋ ಪ್ಲಾಟ್ಫಾರ್ಮ್ಸ್ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ. ಲಿಸ್ಟಿಂಗ್ನಲ್ಲಿ ಶೇ 15ರಿಂದ 20ರಷ್ಟು ಲಾಭದ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ಕಾಣುತ್ತಿದ್ದಾರೆ. ಆದರೆ ವಾಸ್ತವ ಬೆಲೆಯು ಮಾರುಕಟ್ಟೆ ಪರಿಸ್ಥಿತಿ ಮತ್ತು ಹೂಡಿಕೆದಾರರ ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.
ಅಕ್ಟೋಬರ್ 16ರ ತನ್ನ ಐಪಿಒ ಟಿಪ್ಪಣಿಯಲ್ಲಿ ಎಮ್ಕೇ (Emkay) ರೀಸರ್ಚ್, ಜಿಯೋ ಐಪಿಒಗೆ ‘ಸಬ್ಸ್ಕ್ರೈಬ್’ ರೇಟಿಂಗ್ ನೀಡಿದೆ. ಜಿಯೋದ ಮಾರುಕಟ್ಟೆ ನಾಯಕತ್ವ, ದರ ನಿಗದಿ ಸಾಮರ್ಥ್ಯ, ಕಾರ್ಯಗತಗೊಳಿಸುವಿಕೆ ದಾಖಲೆ ಹಾಗೂ ಮುಂದಿರುವ ಹಲವು ಬೆಳವಣಿಗೆಯ ಅವಕಾಶಗಳನ್ನು ಪರಿಗಣಿಸಿದರೆ ಬೆಲೆ ಶ್ರೇಣಿ ಸಮಂಜಸವಾಗಿ ಕಾಣುತ್ತದೆ ಎಂದು ಬ್ರೋಕರೇಜ್ ಹೇಳಿದೆ.
‘ಸ್ವಸ್ತಿಕ ಇನ್ವೆಸ್ಟ್ಮಾರ್ಟ್’ ಕೂಡ ಜಿಯೋ ಐಪಿಒಗೆ ‘ಸಬ್ಸ್ಕ್ರೈಬ್’ ರೇಟಿಂಗ್ ನೀಡಿದೆ. ಅದರ ವರದಿಯ ಪ್ರಕಾರ, ಬೆಲೆ ಶ್ರೇಣಿಯ ಮೇಲಿನ ಮಿತಿಯಲ್ಲಿ ಜಿಯೋ ಹಣಕಾಸು ವರ್ಷ (FY) 26ರ ಗಳಿಕೆಯ ಸುಮಾರು 33.3 ಪಟ್ಟು ಮೌಲ್ಯದಲ್ಲಿದ್ದು, ಭಾರ್ತಿ ಏರ್ಟೆಲ್ನದು 40.7 ಪಟ್ಟು ಇದೆ. ಈ ಆಧಾರದ ಮೇಲೆ ಜಿಯೋ ಏರ್ಟೆಲ್ಗಿಂತ ಸುಮಾರು ಶೇ 18ರಷ್ಟು ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ ಎಂದು ಸ್ವಸ್ತಿಕ ಅಭಿಪ್ರಾಯಪಟ್ಟಿದೆ.
ಇನ್ನೊಂದು ಮೌಲ್ಯಮಾಪನ ಆಧಾರದಲ್ಲಿ, ಕೆಲವು ಮಾರುಕಟ್ಟೆ ತಜ್ಞರು ಜಿಯೋವನ್ನು ಗಳಿಕೆಯ ಸುಮಾರು 33.5 ಪಟ್ಟು ಎಂದು ಅಂದಾಜಿಸಿದ್ದಾರೆ; ಭಾರ್ತಿ ಏರ್ಟೆಲ್ಗೆ ಇದು ಸುಮಾರು 38.9 ಪಟ್ಟು, ಅಂದರೆ ಸುಮಾರು ಶೇ 14ರಷ್ಟು ರಿಯಾಯಿತಿ. ಆದರೆ ಜಿಯೋದ ಭವಿಷ್ಯದ ಬೆಳವಣಿಗೆಯ ಕೆಲವು ಭಾಗ ಈಗಿನ ಮೌಲ್ಯಮಾಪನದಲ್ಲೇ ಪ್ರತಿಫಲಿಸಿದೆ ಎಂದು ವಿಶ್ಲೇಷಕರು ಗಮನಿಸುತ್ತಾರೆ.
ಮತ್ತೊಂದು ಪ್ರಮುಖ ಪಾಸಿಟಿವ್ ಅಂಶವೆಂದರೆ, ಜಿಯೋ 5ಜಿ ಹೊರತರುವಿಕೆಯ ಕ್ಯಾಪಿಟಲ್ ಇಂಟೆನ್ಸಿವ್ ದಾಟುತ್ತಿರುವಂತೆ ಕಾಣುತ್ತಿದೆ. ಎಮ್ಕೇ ರೀಸರ್ಚ್ ಪ್ರಕಾರ, ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಹಣಕಾಸು ವರ್ಷ (FY) 24ರಲ್ಲಿ ಆದಾಯದ ಶೇ 48.8ರಷ್ಟು ಇದ್ದದ್ದು ಹಣಕಾಸಿನ ವರ್ಷ (FY) 26ರಲ್ಲಿ ಶೇಕಡಾ 23.3ಕ್ಕೆ ಇಳಿದಿದೆ ಮತ್ತು ಹಾಣಕಾಸು ವರ್ಷ (FY) 26ರಲ್ಲಿ ಫ್ರೀ ಕ್ಯಾಶ್ ಫ್ಲೋ ಸುಮಾರು ₹32,500 ಕೋಟಿ ಆಗಿತ್ತು. ದೊಡ್ಡ ಪ್ರಮಾಣದ ನೆಟ್ವರ್ಕ್ ಹೂಡಿಕೆಯ ಅಗತ್ಯ ಕಡಿಮೆಯಾದಂತೆ ನಗದು ಸೃಷ್ಟಿ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಬ್ರೋಕರೇಜ್ ನಿರೀಕ್ಷಿಸುತ್ತದೆ.
ದೀರ್ಘಾವಧಿಯಲ್ಲಿ ವಿಶ್ಲೇಷಕರು ಜಿಯೋದ ಮೂಲ ಮೊಬಿಲಿಟಿ ವ್ಯವಹಾರವನ್ನು ಮೀರಿ ನೋಡುತ್ತಿದ್ದಾರೆ. ಹೋಮ್ ಬ್ರಾಡ್ಬ್ಯಾಂಡ್, ಉದ್ಯಮ ಸೇವೆಗಳು, ಕ್ಲೌಡ್, ಎಐ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ತಂತ್ರಜ್ಞಾನ ಸ್ಟ್ಯಾಕ್ನ ಹಣಗಳಿಕೆಯನ್ನು ಮುಂದಿನ ಬೆಳವಣಿಗೆಯ ಚಾಲಕಗಳಾಗಿ ಪರಿಗಣಿಸಲಾಗಿದೆ. ಹೋಮ್ ಬ್ರಾಡ್ಬ್ಯಾಂಡ್ ಪ್ರಮುಖ ಬೆಳವಣಿಗೆಯ ಅವಕಾಶ ಎಂದು ಎಮ್ಕೇ ಗುರುತಿಸಿದ್ದು, ಜಿಯೋದ ಸ್ವಂತ ತಂತ್ರಜ್ಞಾನ ಸ್ಟ್ಯಾಕ್ಗೆ ವಿದೇಶಗಳಲ್ಲಿ ಸಾಮರ್ಥ್ಯವಿದೆ ಎಂದೂ ಹೇಳುತ್ತದೆ.
ಜಿಯೋದ ಸ್ವತಂತ್ರ ಲಿಸ್ಟಿಂಗ್ ರಿಲಯನ್ಸ್ ಇಂಡಸ್ಟ್ರೀಸ್ಗೂ ಪರಿಣಾಮ ಬೀರಬಹುದು. ಜಿಯೋ ತನ್ನ ಐಪಿಒ ಬೆಲೆ ಶ್ರೇಣಿಯನ್ನು ಪ್ರಕಟಿಸಿದ ನಂತರ ಅಕ್ಟೋಬರ್ 15ರಂದು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸುಮಾರು ಶೇ 3.4ರಷ್ಟು ಏರಿಕೆ ಕಂಡವು. ರಿಲಯನ್ಸ್ ಷೇರುದಾರರಿಗೆ ಮತ್ತಷ್ಟು ಮೌಲ್ಯ ಅನಾವರಣಕ್ಕೆ ಈ ಲಿಸ್ಟಿಂಗ್ ಪೂರಕ ಆಗಬಹುದೇ ಎಂಬುದನ್ನೂ ಮಾರುಕಟ್ಟೆ ಗಮನಿಸುತ್ತಿದೆ.






















