SK Home Ad
Home ಸುದ್ದಿ ರಾಜ್ಯ ರೈತರಿಗೆ ಪರಿಹಾರ ನೀಡಿ, ಇಲ್ಲವೇ ದಿವಾಳಿಯಾಗಿದ್ದೇವೆಂದು ಒಪ್ಪಿಕೊಳ್ಳಿ

ರೈತರಿಗೆ ಪರಿಹಾರ ನೀಡಿ, ಇಲ್ಲವೇ ದಿವಾಳಿಯಾಗಿದ್ದೇವೆಂದು ಒಪ್ಪಿಕೊಳ್ಳಿ

0
9

ಹುಬ್ಬಳ್ಳಿ: ಬರದಿಂದ ಶೇ. 82ರಷ್ಟು ಬೆಳೆ ಹಾನಿಯಾಗಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2,500 ರೂ ಪರಿಹಾರ ಘೋಷಿಸಿ ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಸರ್ಕಾರ ತಕ್ಷಣ ರೈತರಿಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಹಣವಿಲ್ಲದಿದ್ದರೆ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಲಿ. ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಪರಿಹಾರ ಬಿಡುಗಡೆ ಮಾಡಬೇಕು. ಬಳಿಕ ಕೇಂದ್ರದ ನೆರವು ಪಡೆಯಲು ಬಿಜೆಪಿ ಸಹಕರಿಸಲಿದೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಸಮಿತಿ ವರದಿ ಆಧರಿಸಿ ರೈತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಎರಡು ಮದುವೆಯಾಗಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಯಾರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸ್ವಾಮೀಜಿಗಳು ರಾಜಕೀಯ ರಾಯಭಾರಿಗಳಲ್ಲ ಎಂದ ಅವರು, ಧಾರ್ಮಿಕ ಗುರುಗಳ ಕುರಿತು ಮುಖ್ಯಮಂತ್ರಿಗಳ ಹೇಳಿಕೆ ಖಂಡನೀಯ ಎಂದರು.

ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ವಿರೋಧಿಸುವುದು ಸರಿಯಲ್ಲ. ಮೃತರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸುವುದು ಅಗತ್ಯ ಎಂದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಂದ್ರ ಕೌತಾಳ, ಮಂಜುನಾಥ ಕಾಟ್ಕರ್, ವಸಂತ ನಾಡಜೋಶಿ, ಸುಭಾಷ್ ಅಂಕಲಕೋಟಿ, ಮಂಜುನಾಥ ಕೊಂಡಪಲ್ಲಿ, ರಾಜು ಕೋರ್ಯಾನಮಠ ಇದ್ದರು.