ಬೆಂಗಳೂರು: ಬಿಗ್ ಬಾಸ್ ಕನ್ನಡದ 4ನೇ ವಾರದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ದೊಡ್ಮನೆಯ ವಾತಾವರಣ ತೀವ್ರ ಕಾವು ಪಡೆದುಕೊಂಡಿದೆ. ಈ ವಾರದ ಅತ್ಯಂತ ಪ್ರಮುಖ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪರ್ಧಿಗಳು ನಿಯಮಗಳನ್ನು ಗಾಳಿಗೆ ತೂರಿ ಉಡಾಫೆಯಿಂದ ವರ್ತಿಸಿದ್ದಾರೆ. ಸ್ಪರ್ಧಿಗಳ ಈ ಅಶಿಸ್ತಿನ ನಡವಳಿಕೆಯಿಂದ ತೀವ್ರ ಅಸಮಾಧಾನಗೊಂಡ ಬಿಗ್ ಬಾಸ್, “ನೀ ಯಾರೂ ಈ ಹುದ್ದೆಗೆ ಅರ್ಹರಲ್ಲ” ಎಂದು ಛೀಮಾರಿ ಹಾಕಿದ್ದು, ಟಾಸ್ಕ್‌ನ್ನೇ ಸಂಪೂರ್ಣವಾಗಿ ರದ್ದುಗೊಳಿಸಿ ಬಿಗ್ ಶಾಕ್ ನೀಡಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗುತ್ತಿದ್ದಂತೆಯೇ ಸ್ಪರ್ಧಿಗಳಲ್ಲಿ, ಅದರಲ್ಲೂ ಸಂಚಾಲಕರಾಗಿದ್ದ ಲಿಖಿತ್ ಮತ್ತು ಮಂಜು ತಾವು ಮಾಡಿದ ತಪ್ಪಿನ ಅರಿವಾಗಿದೆ. ಶನಿವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ವಿಚಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ ಎಂಬ ಭಯ ಮನೆಮಂದಿಯನ್ನು ಕಾಡುತ್ತಿದೆ. ಪ್ರತಿಯೊಂದು ತಪ್ಪನ್ನೂ ಎಳೆಎಳೆಯಾಗಿ ಬಿಡಿಸಿಟ್ಟು ನೈಂಟಿ ಡಿಗ್ರಿ ಕ್ಲಾಸ್ ತೆಗೆದುಕೊಳ್ಳುವ ಸುದೀಪ್ ಅವರನ್ನು ಎದುರಿಸಲು ಸ್ಪರ್ಧಿಗಳು ನಡುಗುತ್ತಿದ್ದಾರೆ.
ಮನೆಯಲ್ಲಿ ಯಶಸ್, ಲಿಖಿತ್ ಹಾಗೂ ಮಂಜು ಒಂದೆಡೆ ಕುಳಿತು ಈ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಮಾಡ್ರನ್ ಮಂಜು, “ನನ್ನ ಭವಿಷ್ಯ ಅತಿ ಸುಂದರವಾಗಿ, ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ವ್ಯಂಗ್ಯವಾಗಿ ಹೇಳಿದರೆ, ಲಿಖಿತ್ ಗೋಂದಿ “ಈ ವಾರ ಚಪ್ಪಾಳೆ ಅಲ್ಲ, ಚಪ್ಪಲಿ ಏಟು ಬೀಳುವುದು ಖಂಡಿತ” ಎಂದಿದ್ದಾರೆ. ಇದೇ ವೇಳೆ ಮಹಾಕವಿ ಮಂಜು, “ಈ ವಾರ ಧ್ವಂಸ ಅಲ್ಲ, ಗುಡ್ಡೆ ಮಾಂಸ” ಎಂದು ಕಿಚ್ಚನ ಕ್ಲಾಸ್ ಬಗ್ಗೆ ತಮಾಷೆಯಾಗಿ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, ಕ್ಯಾಪ್ಟನ್ಸಿ ಟಾಸ್ಕ್ ರದ್ದಾದ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ಕೊಟ್ಟಿದ್ದ ತಾಂಡವ್ ರಾಮ್‌ಗೆ ನೇರವಾಗಿ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಈ ನಿರ್ಧಾರದ ಹಿಂದೆ ಬಿಗ್ ಬಾಸ್‌ನ ತಂತ್ರವಿದೆಯೇ ಅಥವಾ ತಾಂಡವ್ ಅವರನ್ನು ನಾಯಕನನ್ನಾಗಿ ಮಾಡಲೆಂದೇ ಟಾಸ್ಕ್ ರದ್ದುಗೊಳಿಸಲಾಯಿತೇ ಎಂಬ ಶಂಕೆಗಳು ವೀಕ್ಷಕರಲ್ಲಿ ವ್ಯಕ್ತವಾಗಿವೆ.






















