SK Home Ad
Home ಕ್ರೀಡೆ WPL 2027: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಲ್ಯೂಕ್ ವಿಲಿಯಮ್ಸ್ ನೂತನ ಮುಖ್ಯ ಕೋಚ್

WPL 2027: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಲ್ಯೂಕ್ ವಿಲಿಯಮ್ಸ್ ನೂತನ ಮುಖ್ಯ ಕೋಚ್

0
11

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ (WPL) ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್, ಮುಂಬರುವ 2027ರ ಸೀಸನ್‌ಗಾಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರನ್ನು ತನ್ನ ಮಹಿಳಾ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಕಳೆದ ಆವೃತ್ತಿಯಲ್ಲಿ ತಂಡವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಫ್ರಾಂಚೈಸಿ ಈ ಪ್ರಮುಖ ಬದಲಾವಣೆ ಮಾಡಿದೆ.

ಕಳೆದ ಸೀಸನ್‌ನಲ್ಲಿ ತರಬೇತುದಾರರಾಗಿದ್ದ ಲಿಸಾ ಕೀಟ್ಲಿ ಸ್ಥಾನಕ್ಕೆ ಲ್ಯೂಕ್ ವಿಲಿಯಮ್ಸ್ ನೇಮಕಗೊಂಡಿದ್ದಾರೆ. ಕೀಟ್ಲಿ ಮಾರ್ಗದರ್ಶನದಲ್ಲಿ ಮುಂಬೈ ತಂಡವು ಆಡಿದ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು, 5 ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕೇವಲ ಒಂದು ಸೀಸನ್‌ ಬಳಿಕ ಕೀಟ್ಲಿ ಅವರಿಗೆ ಫ್ರಾಂಚೈಸಿ ಬೀಳ್ಕೊಡುಗೆ ನೀಡಿದೆ.

ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಕೈಜೋಡಿಸಲಿರುವ ಹೊಸ ಕೋಚ್ ವಿಲಿಯಮ್ಸ್, 2027ರ ಸೀಸನ್‌ಗೆ ಹೊಸ ತಂತ್ರಗಳನ್ನು ರೂಪಿಸಲಿದ್ದಾರೆ. ಈ ನೇಮಕದ ಕುರಿತು ಮಾತನಾಡಿದ ಮುಂಬೈ ಇಂಡಿಯನ್ಸ್ ಸಹ-ಮಾಲೀಕಿ ನೀತಾ ಅಂಬಾನಿ, “ವಿಲಿಯಮ್ಸ್ ಅವರಿಗೆ ಮಹಿಳಾ ಕ್ರಿಕೆಟ್ ಬಗ್ಗೆ ಅಪಾರ ತಿಳುವಳಿಕೆ ಹಾಗೂ ಆಟಗಾರ್ತಿಯರನ್ನು ಬೆಳೆಸುವ ಉತ್ತಮ ಅನುಭವವಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

WPLನ ನಾಲ್ಕು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು 2023 ಮತ್ತು 2025 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈಗ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಗುರಿಯೊಂದಿಗೆ ತಂಡವು ಹೊಸ ಯೋಜನೆಯಡಿ ಸಜ್ಜಾಗುತ್ತಿದೆ.