ಬೆಂಗಳೂರು: ಇಬ್ಬರು ಮಕ್ಕಳ ತಾಯಿಯೊಬ್ಬಳನ್ನು ನಂಬಿ ಪ್ರೀತಿಸಿದ ಖ್ಯಾತ ಟ್ಯಾಟೂ ಆರ್ಟಿಸ್ಟ್ ಹಾಗೂ ಅರ್ಜುನ್ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು, ಹಲ್ಲೆಗೊಳಗಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡು ವರ್ಷಗಳ ಹಿಂದೆ ಅರ್ಜುನ್ ಟ್ಯಾಟೂ ಸ್ಟುಡಿಯೋಗೆ ಬಂದಿದ್ದ ಮಹಿಳೆ, ತನ್ನ ಗಂಡ ಮೃತಪಟ್ಟಿದ್ದಾನೆ ಎಂದು ಪರಿಚಯಿಸಿಕೊಂಡಿದ್ದಳು. ಈ ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿತ್ತು. ಇದೇ ಕಾರಣಕ್ಕೆ ಅರ್ಜುನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಅರ್ಜುನ್‌ನ್ನು ಮದುವೆಯಾಗುವುದಾಗಿ ನಂಬಿಸಿದ ಮಹಿಳೆ, ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಳು. ಆದರೆ ಕಳೆದ ಒಂದು ವರ್ಷದಿಂದ ಮದುವೆ ವಿಷಯವನ್ನು ಮುಂದೂಡುತ್ತಲೇ ಬಂದಿದ್ದಳು.
ಇತ್ತೀಚೆಗೆ ಸೆಪ್ಟೆಂಬರ್ 2ರಂದು ಅರ್ಜುನ್ ಕರೆ ಮಾಡಿದಾಗ ಮಹಿಳೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಆಕೆಯ ಮನೆಗೆ ತೆರಳಿದಾಗ, ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಇದನ್ನು ಅರ್ಜುನ್ ಪ್ರಶ್ನಿಸಿದಾಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಮಹಿಳೆ ಹಾಗೂ ಆಕೆಯ ಕಡೆಯವರು ಕಬ್ಬಿಣದ ರಾಡ್‌ನಿಂದ ಅರ್ಜುನ್ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ.
ಘಟನೆಯಿಂದ ಗಾಯಗೊಂಡಿದ್ದ ಅರ್ಜುನ್, ಆರಂಭದಲ್ಲಿ ಮಾನಹಾನಿಗೆ ಅಂಜಿ ಅಪಘಾತ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆದ್ರೆ ಬಳಿಕ ಸತ್ಯ ಮುಚ್ಚಿಡಲಾಗದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿನಿಮಾ ರಂಗದಲ್ಲೂ ಸಕ್ರಿಯರಾಗುತ್ತಿರುವ ಅರ್ಜುನ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





















