SK Home Ad
Home ಸುದ್ದಿ ‘ಉಮರ್ ಖಾಲಿದ್‌ಗೆ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ’: ಹೇಳಿಕೆ ಸಮರ್ಥಿಸಿ ಆರ್‌ಎಸ್‌ಎಸ್ ವಿರುದ್ಧ ಬಿ.ಕೆ.ಹರಿಪ್ರಸಾದ್ ಕಿಡಿ!

‘ಉಮರ್ ಖಾಲಿದ್‌ಗೆ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ’: ಹೇಳಿಕೆ ಸಮರ್ಥಿಸಿ ಆರ್‌ಎಸ್‌ಎಸ್ ವಿರುದ್ಧ ಬಿ.ಕೆ.ಹರಿಪ್ರಸಾದ್ ಕಿಡಿ!

0
21

ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಒಬ್ಬ ‘ರಾಷ್ಟ್ರೀಯವಾದಿ’ ಎಂಬ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಗೆ ಬಿಜೆಪಿ ನಾಯಕರಿಂದ ವ್ಯಕ್ತವಾದ ತೀವ್ರ ವಿರೋಧಕ್ಕೆ ಬೆಂಗಳೂರಿನಲ್ಲಿ ಆಕ್ರೋಶಭರಿತವಾಗಿ ತಿರುಗೇಟು ನೀಡಿದ ಅವರು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಯಾರು ನಿಲ್ಲುತ್ತಾರೋ ಅವರೇ ನಿಜವಾದ ನಾಗರಿಕರು. ಯಾರು ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ವಿರೋಧಿಸುತ್ತಾರೋ, ಯಾರು ಖಾಕಿ ಚಡ್ಡಿ ಮತ್ತು ಕರಿ ಟೋಪಿ ಧರಿಸಿ ದೊಣ್ಣೆ ಹಿಡಿದುಕೊಂಡು ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲವೋ ಅವರೇ ದೇಶದ್ರೋಹಿಗಳು’ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಗುರಿಯಾಗಿಸಿ ಹರಿಹಾಯ್ದರು.

ಮುಂದುವರಿದು ಮಾತನಾಡಿದ ಅವರು, ‘ನಮ್ಮ ಉಮರ್ ಖಾಲಿದ್ ಎಲ್ಲೂ ಸಂವಿಧಾನ ಹಾಗೂ ತ್ರಿವರ್ಣ ಧ್ವಜದ ವಿರುದ್ಧ ಮಾತನಾಡಿಲ್ಲ. ಬರೋಬ್ಬರಿ 6 ವರ್ಷಗಳ ಕಾಲ ಅನ್ಯಾಯವಾಗಿ ಜೈಲಿನಲ್ಲಿದ್ದರೂ ನ್ಯಾಯಾಂಗದ ವಿರುದ್ಧ ಮಾತನಾಡದೆ ಗೌರವ ಉಳಿಸಿಕೊಂಡಿದ್ದಾರೆ. ಉಮರ್ ಖಾಲಿದ್‌ಗೆ ಬಿಜೆಪಿಯವರಿಂದ ದೇಶಭಕ್ತಿಯ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ. ಬಿಜೆಪಿಯ ಜೆ.ಪಿ. ನಡ್ಡಾ ಅಥವಾ ಬಿ.ವೈ. ವಿಜಯೇಂದ್ರ ಯಾರೂ ನ್ಯಾಯಾಧೀಶರಲ್ಲ ಮತ್ತು ಬಿಜೆಪಿ ಕಚೇರಿಯೂ ನ್ಯಾಯಾಲಯವಲ್ಲ. ಯಾರು ದೇಶದ್ರೋಹಿ ಎಂದು ತೀರ್ಮಾನಿಸಲು ನ್ಯಾಯಾಲಯವಿದೆ. ಇವರ ಯೋಗ್ಯತೆಗೆ ಖಾಲಿದ್ ಮೇಲೆ ಸರಿಯಾಗಿ ಚಾರ್ಜ್‌ಶೀಟ್ ಹಾಕಲು ಆಗಿಲ್ಲ’ ಎಂದು ಕಿಡಿಕಾರಿದರು.

ಇದೇ ವೇಳೆ, ಹರಿಪ್ರಸಾದ್ ಅವರ ಮಾತು ‘ರಾಷ್ಟ್ರಘಾತುಕ ಹೇಳಿಕೆ’ ಎಂದು ಟೀಕಿಸಿದ್ದ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧವೂ ಹರಿಹಾಯ್ದ ಅವರು, ‘ದೇಶದ್ರೋಹಿಗಳೆಲ್ಲಾ ಹಾಗೆಯೇ ಮಾತನಾಡುತ್ತಾರೆ’ ಎಂದು ತಿರುಗೇಟು ನೀಡಿದರು. ಹರಿಪ್ರಸಾದ್ ಅವರ ಈ ಹೇಳಿಕೆ ರಾಜ್ಯ ರಾಜಕೀಯ ಅಂಗಳದಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.