“ಪರಿಷತ್ತಿನ ಶುದ್ಧೀಕರಣಕ್ಕೆ ಜಾಣಗೆರೆ ಅವರನ್ನು ಅಧ್ಯಕ್ಷ ಅಭ್ಯರ್ಥಿ ಮಾಡಿದ್ದೇವೆ”
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯ ಹಾಗೂ ಸ್ವಾಯತ್ತತೆಯನ್ನು ಕಳೆದುಕೊಂಡು ರಾಜಕೀಯ ಹಿತಾಸಕ್ತಿ ಮತ್ತು ಸ್ವಾರ್ಥಗಳ ಹಿಡಿತಕ್ಕೆ ಸಿಲುಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರಭುತ್ವದ ಧೋರಣೆಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ರೂಪಿಸಿದ್ದರು. ಅರಮನೆಯ ತಮಟೆಯಂತೆ ಬಳಸದೆ ಪರಿಷತ್ತಿಗೆ ಸ್ವಾಯತ್ತತೆ ನೀಡಿದ್ದರು. ಕಳೆದ ನೂರು ವರ್ಷಗಳಲ್ಲಿ ಅಲ್ಲಲ್ಲಿ ಲೋಪಗಳು ಕಂಡುಬಂದಿದ್ದರೂ ಅದರ ಸ್ವಾಯತ್ತತೆಗೆ ಧಕ್ಕೆ ಬಂದಿರಲಿಲ್ಲ. ನಾಡು, ನೆಲ, ಜಲ ಸೇರಿದಂತೆ ವಿವಿಧ ವಿಚಾರಗಳಲ್ಲಿ ಪರಿಷತ್ತು ಧ್ವನಿ ಎತ್ತುತ್ತಿತ್ತು ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಿಂತ ರಾಜಕೀಯ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಮೂರು ವರ್ಷಗಳ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿರುವುದು ಅನ್ಯಾಯ. ರಾಜಕೀಯ ಹಸ್ತಕ್ಷೇಪದಿಂದಾಗಿ ಪರಿಷತ್ತಿನ ಸ್ವಾಯತ್ತತೆಯೇ ಪ್ರಶ್ನಾರ್ಹವಾಗಿದೆ ಎಂದು ದೂರಿದರು.
“ಬೈಲಾ ತಿದ್ದುಪಡಿ ಮೂಲಕ ಮೂಲ ಸ್ವರೂಪಕ್ಕೆ ಧಕ್ಕೆ”: ಕಳೆದ ಚುನಾವಣೆಯ ಬಳಿಕ ನಡೆದ ಬೆಳವಣಿಗೆಗಳಿಂದ ಪರಿಷತ್ತಿನ ಮೂಲ ಮಾದರಿಯೇ ಬದಲಾಗಿದೆ. ಜಿಲ್ಲಾ ಅಧ್ಯಕ್ಷರ ನೇಮಕಾತಿ ಹಾಗೂ ಪಡೆ ಕಟ್ಟಿಕೊಂಡು ಬೈಲಾಗಳಿಗೆ ತಿದ್ದುಪಡಿ ಮಾಡಿಕೊಳ್ಳಲಾಗಿದೆ. ಪ್ರಶ್ನಿಸುವ ವ್ಯಕ್ತಿಗಳ ಸದಸ್ಯತ್ವ ಕಿತ್ತುಹಾಕುವ ಪ್ರಯತ್ನವೂ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡವಳಿಕೆ ಅವಮಾನ ಮತ್ತು ಅಗೌರವಕ್ಕೆ ಕಾರಣವಾಗುವ ರೀತಿಯಲ್ಲಿತ್ತು. ಹಣಕಾಸು ದುರುಪಯೋಗದ ಆರೋಪಗಳೂ ಕೇಳಿಬಂದಿದ್ದು, ಈ ಕುರಿತು ವಿಚಾರಣಾ ಸಮಿತಿ ರಚನೆಯಾಗಿ 16 ಆರೋಪಗಳು ಸಾಬೀತಾಗಿವೆ. ಸಮಿತಿಯ ಶಿಫಾರಸು ಆಧಾರದ ಮೇಲೆ ಅಧ್ಯಕ್ಷರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದರು.
ಸಾಹಿತ್ಯದ ಬೆಳವಣಿಗೆಗೆ ವೇದಿಕೆಯಾಗಬೇಕಿದ್ದ ಸಾಹಿತ್ಯ ಪರಿಷತ್ತು ಅಸಾಹಿತ್ಯದ ಹಾಗೂ ಕೆಟ್ಟ ಬೆಳವಣಿಗೆಗಳ ಕೇಂದ್ರವಾಗುವ ಸ್ಥಿತಿಗೆ ತಲುಪಿರುವುದು ಆತಂಕಕಾರಿ. ಪರಿಷತ್ತನ್ನು ಉಳಿಸಿ ಅದರ ಮೂಲ ಆಶಯವನ್ನು ಪುನಃ ಸ್ಥಾಪಿಸುವ ಉದ್ದೇಶದಿಂದ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಾಹಿತ್ಯ ಪರಿಷತ್ತಿನ ಶುದ್ಧೀಕರಣ ಕಾರ್ಯಕ್ಕೆ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಹಾಗೂ ಸದಸ್ಯರು ಕೈಜೋಡಿಸಬೇಕು. ಪರಿಷತ್ತಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪುನಃ ಸ್ಥಾಪಿಸುವ ಅಗತ್ಯವಿದೆ. ಹಿಂದಿನಂತೆ ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಗೆ ನಿಗದಿಪಡಿಸುವುದು ಸೇರಿದಂತೆ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
“ಸಾಹಿತ್ಯ ಪರಿಷತ್ತು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿ, ತನ್ನ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯದೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















