SK Home Ad
Home ನಮ್ಮ ಜಿಲ್ಲೆ ಬಳ್ಳಾರಿ 9 ದಿನ, 180 ಕಿ.ಮೀ. ನಡಿಗೆ: ಬಳ್ಳಾರಿಗೆ ಭರ್ಜರಿ ಎಂಟ್ರಿ ಕೊಟ್ಟ ‘ಬಳ್ಳಾರಿ ಚಲೋ’

9 ದಿನ, 180 ಕಿ.ಮೀ. ನಡಿಗೆ: ಬಳ್ಳಾರಿಗೆ ಭರ್ಜರಿ ಎಂಟ್ರಿ ಕೊಟ್ಟ ‘ಬಳ್ಳಾರಿ ಚಲೋ’

0
8

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆ 9 ದಿನಗಳ ಬಳಿಕ ಬಳ್ಳಾರಿ ನಗರ ತಲುಪಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕುಡಿತಿನಿ, ಅಲ್ಲಿಪುರ ಮಾರ್ಗವಾಗಿ ನಗರ ಪ್ರವೇಶಿಸಿದ ಪಾದಯಾತ್ರೆಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರೆಯಿತು. ಬಳ್ಳಾರಿಗೆ ಪ್ರವೇಶಿಸುತ್ತಿದ್ದಂತೆಯೇ ವಿಜಯೇಂದ್ರ ನೆಲಕ್ಕೆ ತಲೆಬಾಗಿ ನಮಸ್ಕರಿಸಿದರು.

ಸೆ. 1ರಂದು ರಾಯಚೂರು ಜಿಲ್ಲೆಯ ಲಿಂಗಸ್ಗೂರಿನಿಂದ ಆರಂಭಗೊಂಡ ಪಾದಯಾತ್ರೆ ಮಸ್ಕಿ, ಸಿಂಧನೂರು, ಕನಕಗಿರಿ, ಗಂಗಾವತಿ, ಕಂಪ್ಲಿ, ಸಂಡೂರು ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರಗಳ ಮೂಲಕ ಸಾಗಿ 9 ದಿನಗಳಲ್ಲಿ ಸುಮಾರು 180 ಕಿ.ಮೀ. ಕ್ರಮಿಸಿದೆ. ರೈತರ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳು ಹಾಗೂ ವಿವಿಧ ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹೋರಾಟ ನಡೆಸಿದರು.

ಕೊನೆಯ ದಿನ ಕುಡಿತಿನಿಯಲ್ಲಿ ಸೈಕಲ್ ತುಳಿಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ 13 ಕಿ.ಮೀ. ಕಾಲ್ನಡಿಗೆಯಲ್ಲಿ ಬಳ್ಳಾರಿ ಕಡೆಗೆ ಹೆಜ್ಜೆ ಹಾಕಲಾಯಿತು. ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಬಿ. ಶ್ರೀರಾಮುಲು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುರೇಶ್ ಕುಮಾರ್, ನಳಿನ್ ಕುಮಾರ್ ಕಟೀಲ್, ಬಂಗಾರ ಹನುಮಂತ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಭೂ ಸಂತ್ರಸ್ತ ರೈತರ ಅಹವಾಲು: ಕುಡಿತಿನಿಯಲ್ಲಿ ಕೈಗಾರಿಕೆಗಳಿಗೆ ಜಮೀನು ಕಳೆದುಕೊಂಡು 1,300 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರನ್ನು ಬಿಜೆಪಿ ನಾಯಕರು ಭೇಟಿಯಾಗಿ ಸಮಸ್ಯೆ ಆಲಿಸಿದರು. ನ್ಯಾಯಯುತ ಭೂಬೆಲೆ, ಉದ್ಯೋಗ ಹಾಗೂ ಮನೆ ನಿರ್ಮಾಣಕ್ಕೆ ನಿವೇಶನ ಸೇರಿದಂತೆ ಬೇಡಿಕೆಗಳನ್ನು ರೈತರು ಮುಂದಿಟ್ಟರು. ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ನ್ಯಾಯ ಕೊಡಿಸುವುದಾಗಿ ವಿಜಯೇಂದ್ರ, ಶ್ರೀರಾಮುಲು ಹಾಗೂ ಸಿ.ಟಿ. ರವಿ ಭರವಸೆ ನೀಡಿದರು.

ಬಳ್ಳಾರಿ ಹೊರವಲಯದ ರಾಮೇಶ್ವರಂ ದೇವಸ್ಥಾನದಲ್ಲಿ ಊಟ-ವಿಶ್ರಾಂತಿ ಬಳಿಕ ಪಾದಯಾತ್ರೆ ಅಲ್ಲಿಪುರ ತಲುಪಿತು. ಶಾಸಕ ಬಿ. ನಾಗೇಂದ್ರ ಪ್ರತಿನಿಧಿಸುವ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಲ್ಲಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.

ಬಹಿರಂಗ ಸಮಾವೇಶದಲ್ಲಿ ವಿಜಯೇಂದ್ರ, ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿದಂತೆ ಹಲವು ನಾಯಕರು ರಾಜ್ಯ ಸರ್ಕಾರ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಸುಧಾ ಸರ್ಕಲ್, ಮೋತಿ ವೃತ್ತ, ತೇರುಬಜಾರ್, ಬೆಂಗಳೂರು ರಸ್ತೆ ಮೂಲಕ ಸಾಗಿದ ಪಾದಯಾತ್ರೆ ರಾಯಲ್ ಸರ್ಕಲ್‌ನಲ್ಲಿ ಅಂತ್ಯಗೊಂಡಿತು.

ಸೆ. 10ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.