ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ದಕ್ಷಿಣ ಭಾರತದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರೈಲ್ವೆ ಸಚಿವಾಲಯದ ಒಟ್ಟು ₹10,021 ಕೋಟಿ ಅಂದಾಜು ವೆಚ್ಚದ 5 ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಗಳಿಂದ ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 540 ಕಿ.ಮೀ. ಹೆಚ್ಚುವರಿ ರೈಲು ಮಾರ್ಗ ಸೇರ್ಪಡೆಯಾಗಲಿದೆ. ಯೋಜನೆಗಳನ್ನು 2029-30ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಒಟ್ಟು 17 ಜಿಲ್ಲೆಗಳಲ್ಲಿ ಹಾದುಹೋಗುವ ಈ ಯೋಜನೆಗಳಿಂದ ಸುಮಾರು 2,121 ಗ್ರಾಮಗಳ 52 ಲಕ್ಷ ಜನರಿಗೆ ರೈಲು ಸಂಪರ್ಕ ಮತ್ತು ಸಾರಿಗೆ ಸೌಲಭ್ಯ ಮತ್ತಷ್ಟು ಸುಧಾರಿಸಲಿದೆ.
ಯಾವೆಲ್ಲ ರೈಲ್ವೆ ಮಾರ್ಗಗಳಿಗೆ ಯೋಜನೆ?
ಅರಕ್ಕೋಣಂ–ರೇಣಿಗುಂಟ: 77 ಕಿ.ಮೀ. ವ್ಯಾಪ್ತಿಯಲ್ಲಿ 3ನೇ ಮತ್ತು 4ನೇ ರೈಲು ಮಾರ್ಗ
ವೈಟ್‌ಫೀಲ್ಡ್–ಬಂಗಾರಪೇಟೆ: 47 ಕಿ.ಮೀ. ವ್ಯಾಪ್ತಿಯಲ್ಲಿ 3ನೇ ಮತ್ತು 4ನೇ ಮಾರ್ಗ
ಹೊಸೂರು–ಓಮಲೂರು: 147 ಕಿ.ಮೀ. ಮಾರ್ಗ ದ್ವಿಪಥೀಕರಣ
ಸೇಲಂ–ಕರೂರು–ದಿಂಡಿಗಲ್: 159 ಕಿ.ಮೀ. ಮಾರ್ಗ ದ್ವಿಪಥೀಕರಣ
ಸಿಕಂದರಾಬಾದ್ (ಘಟ್‌ಕೇಸರ್)–ಕಾಜಿಪೇಟೆ: 110 ಕಿ.ಮೀ. ಮಲ್ಟಿಟ್ರ್ಯಾಕಿಂಗ್
ಈ ಯೋಜನೆಗಳು ಒಟ್ಟಾರೆ 540 ಕಿ.ಮೀ. ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲಿವೆ.
ಕರ್ನಾಟಕಕ್ಕೆ ಮಹತ್ವದ ಯೋಜನೆ: ಕರ್ನಾಟಕದಲ್ಲಿ ವೈಟ್‌ಫೀಲ್ಡ್–ಬಂಗಾರಪೇಟೆ 47 ಕಿ.ಮೀ. ವ್ಯಾಪ್ತಿಯ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ಹೊಸೂರು–ಓಮಲೂರು 147 ಕಿ.ಮೀ. ಮಾರ್ಗದ ದ್ವಿಪಥೀಕರಣ ಪ್ರಮುಖ ಯೋಜನೆಗಳಾಗಿವೆ. ಇವು ಬೆಂಗಳೂರು–ಕೋಲಾರ–ಬಂಗಾರಪೇಟೆ ಭಾಗದ ರೈಲು ಸಂಚಾರ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಕೈಗಾರಿಕಾ ಹಾಗೂ ಸರಕು ಸಾಗಣೆಗೆ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ.
ಪ್ರಯಾಣಿಕರು, ಸರಕು ಸಾಗಣೆಗೆ ಅನುಕೂಲ: ಮಲ್ಟಿಟ್ರ್ಯಾಕಿಂಗ್ ಯೋಜನೆಗಳ ಮುಖ್ಯ ಉದ್ದೇಶ ಈಗಿರುವ ರೈಲು ಮಾರ್ಗಗಳ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವುದು, ರೈಲುಗಳ ಸಂಚಾರವನ್ನು ಸುಗಮಗೊಳಿಸುವುದು ಹಾಗೂ ಪ್ರಯಾಣಿಕ ಮತ್ತು ಸರಕು ರೈಲುಗಳ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ.
ಪ್ರವಾಸೋದ್ಯಮಕ್ಕೂ ಉತ್ತೇಜನ: ಯೋಜನೆಗಳಿಂದ ದಕ್ಷಿಣ ಭಾರತದ ಹಲವು ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ತಿರುಪತಿ, ತಿರುಟ್ಟಣಿ, ತಿರುಚಾನೂರು, ಕೋಲಾರ ಗೋಲ್ಡ್ ಫೀಲ್ಡ್ಸ್, ಹೊಗೆನಕಲ್ ಜಲಪಾತ, ಮೆಟ್ಟೂರು ಅಣೆಕಟ್ಟು, ಕೊಡೈಕೆನಾಲ್, ಯಾದಗಿರಿಗುಟ್ಟ ಸೇರಿದಂತೆ ಹಲವು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಸಂಪರ್ಕ ಬಲಪಡಿಸುವ ನಿರೀಕ್ಷೆಯಿದೆ.



















