ಬೆಂಗಳೂರು: “ತಪ್ಪಾಗಿದೆ, ಈ ಬಾರಿ ಕ್ಷಮಿಸಿಬಿಡಿ…” — ಅಶ್ಲೀಲ ಹಾಗೂ ಅವಾಚ್ಯ ಕಾಮೆಂಟ್‌ಗಳ ಆರೋಪ ಎದುರಿಸುತ್ತಿರುವವರು ಕೋರ್ಟ್‌ನಲ್ಲಿ ನಟಿ ರಮ್ಯಾ ಅವರ ಬಳಿ ಕ್ಷಮೆ ಕೋರಿ ಪ್ರಕರಣ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಆರೋಪಿಗಳ ಮನವಿಗೆ ನಟಿ ರಮ್ಯಾ ಯಾವುದೇ ಕಾರಣಕ್ಕೂ ಮಣಿಯದೆ, “ಈ ಪ್ರಕರಣ ಎಲ್ಲರಿಗೂ ಪಾಠವಾಗಬೇಕು” ಎಂದು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹಾಗೂ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ರಮ್ಯಾ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಸದ್ಯ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
‘ತಪ್ಪಾಗಿದೆ, ಕ್ಷಮಿಸಿಬಿಡಿ’ ಎಂದ ಆರೋಪಿಗಳು: ವಿಚಾರಣೆ ವೇಳೆ ಆರೋಪಿಗಳು ರಮ್ಯಾ ಅವರ ಬಳಿ ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ. “ಇದೊಂದು ಬಾರಿ ಕ್ಷಮಿಸಿಬಿಡಿ, ತಪ್ಪಾಗಿದೆ. ಪ್ರಕರಣವನ್ನು ವಾಪಸ್ ಪಡೆಯಿರಿ” ಎಂದು ಮನವಿ ಮಾಡಿದ್ದಾರೆ. ಆರೋಪಿಗಳ ಕುಟುಂಬಸ್ಥರೂ ಕೂಡ ರಮ್ಯಾ ಅವರನ್ನು ಕ್ಷಮಿಸುವಂತೆ ಕೋರಿಕೊಂಡಿದ್ದಾರೆ.
ಪ್ರಕರಣ ಮುಂದುವರಿದರೆ ತಮ್ಮ ಭವಿಷ್ಯ ಹಾಳಾಗಬಹುದು ಎಂದು ಆರೋಪಿಗಳು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಮನವಿಗೆ ರಮ್ಯಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಮೆಂಟ್ ಮಾಡುವ ಮುನ್ನ ಭವಿಷ್ಯದ ಬಗ್ಗೆ ಯೋಚಿಸಿರಲಿಲ್ಲವೇ?: “ಕಾಮೆಂಟ್ ಮಾಡುವಾಗ ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಿರಲಿಲ್ಲವೇ?” ಎಂದು ರಮ್ಯಾ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಕೈಯಲ್ಲಿದೆ ಎಂಬ ಕಾರಣಕ್ಕೆ ಯಾರ ಬಗ್ಗೆಯಾದರೂ ಮನಬಂದಂತೆ ಕಾಮೆಂಟ್ ಮಾಡಲು ಸಾಧ್ಯವೇ? ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾಗಿ ಬರೆಯುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಎಲ್ಲರಿಗೂ ಪಾಠವಾಗಬೇಕು: ಪ್ರಕರಣವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ. “ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ. ಇದೊಂದು ಎಲ್ಲರಿಗೂ ಪಾಠವಾಗಬೇಕು. ಮುಂದೆ ಒಬ್ಬರು ಹೆಣ್ಣುಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು” ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿಚಾರಣೆಯಲ್ಲಿ ಸಾಕ್ಷ್ಯ ಹೇಳಲು ನ್ಯಾಯಾಲಯ ಯಾವಾಗ ಕರೆದರೂ ಹಾಜರಾಗುವುದಾಗಿ ರಮ್ಯಾ ತಿಳಿಸಿದ್ದಾರೆ.
ನೋ ಕಾಂಪ್ರಮೈಸ್: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡುವವರಿಗೆ ಈ ಪ್ರಕರಣ ಎಚ್ಚರಿಕೆಯ ಸಂದೇಶವಾಗಬೇಕು ಎಂಬುದು ರಮ್ಯಾ ಅವರ ನಿಲುವಾಗಿದೆ.
ಕ್ಷಮೆ ಕೋರಿ ಪ್ರಕರಣದಿಂದ ಹೊರಬರಲು ಆರೋಪಿಗಳು ಮನವಿ ಮಾಡಿದರೂ, “ಯಾರನ್ನೂ ಕ್ಷಮಿಸುವುದಿಲ್ಲ” ಎಂದು ರಮ್ಯಾ ಸ್ಪಷ್ಟಪಡಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.





















