SK Home Ad
Home ಸಿನಿ ಮಿಲ್ಸ್ ಕುದುರೆ ರೇಸ್‌ ಹಿನ್ನೆಲೆಯ ‘ಜಾಕಿ 42’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್

ಕುದುರೆ ರೇಸ್‌ ಹಿನ್ನೆಲೆಯ ‘ಜಾಕಿ 42’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್

0
46

ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಜಾಕಿ 42’ ಇದೀಗ ಬಿಡುಗಡೆಗೆ ಮತ್ತಷ್ಟು ಹತ್ತಿರವಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದ್ದು, ಚಿತ್ರದ ಬಿಡುಗಡೆಗೆ ಇದ್ದ ಪ್ರಮುಖ ಹಂತವೊಂದು ಪೂರ್ಣಗೊಂಡಿದೆ.

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕುದುರೆ ರೇಸ್‌ ಅನ್ನು ಪ್ರಮುಖ ಕಥಾ ಹಿನ್ನೆಲೆಯಾಗಿ ಹೊಂದಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ಹಾರ್ಸ್ ರೇಸ್‌ನ್ನು ಕೇಂದ್ರವಾಗಿಸಿಕೊಂಡ ಅಪರೂಪದ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕುದುರೆ ರೇಸ್‌ ಜೊತೆಗೆ ಕೌಟುಂಬಿಕ ಭಾವನೆಗಳನ್ನೂ ಒಳಗೊಂಡಿರುವ ಕಥಾಹಂದರವನ್ನು ಸಿನಿಮಾ ಹೊಂದಿದೆ. ವಿಭಿನ್ನ ಸ್ಕ್ರೀನ್‌ಪ್ಲೇ ಮತ್ತು ಗುಣಮಟ್ಟದ ಮೇಕಿಂಗ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ವಿಶ್ವಾಸವನ್ನು ನಿರ್ದೇಶಕ ಗುರುತೇಜ್ ಶೆಟ್ಟಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರದರ್ಶನಗಳೊಂದಿಗೆ ‘ಜಾಕಿ 42’ ಚಿತ್ರದ ಥಿಯೇಟರಿಕಲ್ ಟ್ರೈಲರ್‌ ಅನ್ನು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗಿತ್ತು. ಈ ಮೂಲಕ ಸಿನಿಮಾ ಬಿಡುಗಡೆಗೂ ಮುನ್ನವೇ ಹೆಚ್ಚಿನ ಪ್ರೇಕ್ಷಕರಿಗೆ ಚಿತ್ರದ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಚಿತ್ರತಂಡ ನಡೆಸಿದೆ.

ಚಿತ್ರದಲ್ಲಿ ಕಿರಣ್ ರಾಜ್ ಅವರೊಂದಿಗೆ ಹೃತಿಕ್ ಶ್ರೀನಿವಾಸ್, ಯುಕ್ತಾ ಶೆಟ್ಟಿ, ರಾಜೇಂದ್ರ ಕಾರಂತ್, ಬಾಲರಾಜ್ ವಾಡೆ, ಗಿರೀಶ್ ಹೆಗ್ಡೆ, ದೀಪಕ್ ರೈ, ಅರುಣ್ ಆಚಾರ್, ಶಾಂತಲ ಕಾಮತ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ ಮತ್ತು ವಿನೋದ್ ಯಜಮಾನ್ಯ ಅವರ ಸಂಗೀತ ಚಿತ್ರಕ್ಕಿದೆ.

ಈಗಾಗಲೇ ಚಿತ್ರದ ಹಾಡುಗಳೂ ಗಮನ ಸೆಳೆದಿದ್ದು, ಜುಲೈನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಅರ್ಮಾನ್ ಮಲಿಕ್ ಮತ್ತು ಪಾಲಕ್ ಮುಚ್ಚಲ್ ಧ್ವನಿ ನೀಡಿದ್ದಾರೆ. ಚಿತ್ರವು ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, U/A ಪ್ರಮಾಣಪತ್ರ ಪಡೆದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.