ದೇಹದ ಆರೋಗ್ಯ, ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ ಪೋಷಕಾಂಶವಾಗಿದೆ. ಆದ್ರೆ ಪ್ರೋಟೀನ್‌ನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕೋ ಅಥವಾ ರಾತ್ರಿ ಊಟದಲ್ಲಿ ಸೇವಿಸಬೇಕೋ ಎಂಬ ಗೊಂದಲ ಹಲವರಲ್ಲಿದೆ. ಪ್ರೋಟೀನ್ ಸೇವನೆಗೆ ‘ಬೆಳಿಗ್ಗೆ’ ಅಥವಾ ‘ರಾತ್ರಿ’ ಎಂದು ನಿರ್ದಿಷ್ಟವಾಗಿ ಒಂದೇ ಸಮಯ ಇರುವುದಿಲ್ಲ, ಬದಲಾಗಿ ದಿನವಿಡೀ ಸಮತೋಲಿತವಾಗಿ ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ದಿನದ ಒಟ್ಟು ಪ್ರೋಟೀನ್ ಅಗತ್ಯವನ್ನು ಒಂದೇ ಹೊತ್ತಿನ ಊಟದಲ್ಲಿ ಪೂರೈಸುವ ಬದಲು ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದಲ್ಲಿ ವಿಂಗಡಿಸಿ ಸೇವಿಸುವುದು ಅತ್ಯಂತ ಪರಿಣಾಮಕಾರಿ ವಿಧಾನ. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸಮೃದ್ಧ ಆಹಾರ ಸೇರಿಸುವುದರಿಂದ ಸುಲಭವಾಗಿ ಹಸಿವಾಗುವುದಿಲ್ಲ. ಪ್ರೋಟೀನ್ ಜೀರ್ಣವಾಗಲು ಹೆಚ್ಚು ಸಮಯ ತಗೆದುಕೊಳ್ಳುವುದರಿಂದ, ಅನಗತ್ಯವಾಗಿ ಪದೇಪದೇ ತಿನ್ನುವ ಅಭ್ಯಾಸ ಮತ್ತು ತೂಕ ಹೆಚ್ಚಳವನ್ನು ತಡೆಯಬಹುದು.
ಬೆಳಿಗ್ಗೆ ಕೇವಲ ಚಹಾ ಮತ್ತು ಬ್ರೆಡ್ ಸೇವಿಸುವ ಬದಲು ಮೊಟ್ಟೆ, ಮೊಸರು, ಪನ್ನೀರ್, ಬೇಳೆಕಾಳುಗಳು ಹಾಗೂ ಮೊಳಕೆ ಬಂದ ಕಾಳುಗಳನ್ನು ಉಪಾಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ. ವಿಶೇಷವಾಗಿ ವೃದ್ಧರು, ತೂಕ ನಿಯಂತ್ರಣದಲ್ಲಿಡಲು ಬಯಸುವವರು ಮತ್ತು ಸ್ನಾಯುಗಳ ಸಾಂದ್ರತೆ ಕಾಯ್ದುಕೊಳ್ಳುವವರಿಗೆ ಪ್ರೋಟೀನ್ ಭರಿತ ಉಪಾಹಾರ ಹೆಚ್ಚು ಪ್ರಯೋಜನಕಾರಿ.
ಒಟ್ಟಾರೆಯಾಗಿ… ರಾತ್ರಿ ಊಟದಲ್ಲಿಯೂ ಪ್ರೋಟೀನ್ ಸೇವನೆ ಅಗತ್ಯವಾಗಿದ್ದರೂ, ಇಡೀ ದಿನದ ಪ್ರೋಟೀನ್‌ನ್ನು ರಾತ್ರಿಗಷ್ಟೇ ಸೀಮಿತಗೊಳಿಸಬಾರದು. ಮೂರೂ ಹೊತ್ತಿನ ಊಟದಲ್ಲೂ ಸಮಾನ ಪ್ರಮಾಣದಲ್ಲಿ ಪ್ರೋಟೀನ್ ಹಂಚಿಕೊಳ್ಳುವುದರಿಂದ ದೇಹವು ಪೋಷಕಾಂಶಗಳನ್ನು ಸೂಕ್ತವಾಗಿ ಹೀರಿಕೊಳ್ಳುತ್ತದೆ. ಪ್ರತಿಯೊಬ್ಬರ ದೇಹದ ಅಗತ್ಯ ಬೇರೆ ಬೇರೆಯಾಗಿರುವುದರಿಂದ, ವಿಶೇಷ ಆರೋಗ್ಯ ಸಮಸ್ಯೆ ಇರುವವರು ಪೌಷ್ಟಿಕತಜ್ಞರ ಅಥವಾ ವೈದ್ಯರ ಸಲಹೆ ಪಡೆಯುವುದು ಸೂಕ್ತ.





















