ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ರ ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ನಂಜನಗೂಡಿನ ಕಾಮನರ್ ಸ್ಪರ್ಧಿ ಕುಮಾರಿ (20) ಕಳೆದ 3,4 ದಿನಗಳಿಂದ ಕಾಣೆಯಾಗಿದ್ದು, ಹತ್ತಾರು ಅನುಮಾನಗಳಿಗೆ ಕಾರಣವಾಗಿತ್ತು. ತಮ್ಮ ಸರಳತೆ, ಮುಗ್ಧತೆ ಹಾಗೂ ಚಾತುರ್ಯದ ಮಾತುಗಳಿಂದ 4 ಜನ ತೀರ್ಪುಗಾರರ ಮನ ಗೆದ್ದು ‘ಸ್ಟಾರ್ ಕಾನ್‌ಟೆಸ್ಟೆಂಟ್’ ಎನಿಸಿಕೊಂಡಿದ್ದ ಕುಮಾರಿ ದಿಢೀರ್ ನಿರ್ಗಮನಕ್ಕೆ ಇದೀಗ ಕಲರ್ಸ್ ಕನ್ನಡ ವಾಹಿನಿ ಅಸಲಿ ಸತ್ಯವನ್ನು ಬಹಿರಂಗಪಡಿಸಿದೆ.
ವಾಹಿನಿಯ ತಿಳಿಸಿರುವ ಪ್ರಕಾರ, ಕುಮಾರಿ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಪರೀಕ್ಷೆ ನಡೆಸಿ, ಇನ್ಮುಂದೆ ಅಗ್ನಿಪರೀಕ್ಷೆಯ ಯಾವುದೇ ಕಠಿಣ ಆಟ ಅಥವಾ ಟಾಸ್ಕ್‌ಗಳಲ್ಲಿ ಭಾಗವಹಿಸದಂತೆ ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ವೈದ್ಯಕೀಯ ಕಾರಣದಿಂದಾಗಿಯೇ ಅವರು ಅನಿವಾರ್ಯವಾಗಿ ಶೋನಿಂದ ಹೊರನಡೆಯಬೇಕಾಯಿತು ಎಂದು ಸ್ಪಷ್ಟಪಡಿಸಲಾಗಿದೆ.
ಆರೋಗ್ಯ ಸಮಸ್ಯೆಯ ನಡುವೆಯೂ ಕುಮಾರಿಯ ಕುಟುಂಬದ ಪರಿಸ್ಥಿತಿ ಹಾಗೂ ಸರಳತೆಯನ್ನು ಗುರುತಿಸಿರುವ ‘ಇಕೋ ಪ್ಲಾನೆಟ್’ ಸಂಸ್ಥೆಯು ದೊಡ್ಡ ನೆರವಿನ ಹಸ್ತ ಚಾಚಿದೆ. ಅವರಿಗೆ ವೇದಿಕೆಯಲ್ಲೇ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗಿದ್ದು, ಕುಮಾರಿ ಡಿಗ್ರಿ ವ್ಯಾಸಂಗ ಮುಗಿದ ತಕ್ಷಣವೇ ತಮ್ಮ ಸಂಸ್ಥೆಯಲ್ಲಿ ಉದ್ಯೋಗ (ಜಾಬ್ ಆಫರ್) ನೀಡುವುದಾಗಿಯೂ ಭರವಸೆ ನೀಡಿದೆ.
ಮತ್ತೊಂದೆಡೆ, ಈ ಹಿಂದೆ ಸ್ಪರ್ಧಿ ಪೂರ್ಣಿಮಾ “ಕುಮಾರಿಯನ್ನು ಒಳಗೆ ಕರೆಸಿಕೊಳ್ಳಲು ನನ್ನನ್ನು ಆಚೆ ಕಳುಹಿಸುತ್ತಿದ್ದೀರಿ” ಎಂದು ಬಿಗ್‌ಬಾಸ್ ಅಗ್ನಿಪರೀಕ್ಷೆ ವೇದಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೊರನಡೆದಿದ್ದರು. ಆದ್ರೆ ಇದೀಗ ಕುಮಾರಿ ಕೂಡ ಆರೋಗ್ಯ ಸಮಸ್ಯೆಯ ನೆಪದಲ್ಲಿ ಹೊರಬಂದಿರುವುದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಮಾರಿಗೆ ನಿಜವಾಗಿಯೂ ಏನಾಗಿತ್ತು ಹಾಗೂ ಈ ನಿರ್ಗಮನದ ಹಿಂದಿರುವ ಅಸಲಿ ಸತ್ಯವೇನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇಂದಿಗೂ ಪ್ರಶ್ನೆಯಾಗಿ ಉಳಿದಿದೆ.




















