SK Home Ad
Home ಸುದ್ದಿ ವಿದೇಶ ಭೀಕರ ಪ್ರವಾಹ: ನೇಪಾಳದಲ್ಲಿ 8 ಮಂದಿ ಸಾವು, 33 ಭದ್ರತಾ ಸಿಬ್ಬಂದಿ ನಾಪತ್ತೆ

ಭೀಕರ ಪ್ರವಾಹ: ನೇಪಾಳದಲ್ಲಿ 8 ಮಂದಿ ಸಾವು, 33 ಭದ್ರತಾ ಸಿಬ್ಬಂದಿ ನಾಪತ್ತೆ

0
34

ಕಠ್ಮಂಡು: ಟಿಬೆಟ್‌ ಗಡಿ ಸಮೀಪದ ನೇಪಾಳದ ರಾಸುವಾ ಜಿಲ್ಲೆಯಲ್ಲಿ ಬುಧವಾರ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. 33 ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಗ್ರಾಮಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳಿಗೆ ವ್ಯಾಪಕ ಹಾನಿಯಾಗಿದೆ.

ರಾಸುವಾ ಜಿಲ್ಲೆಯ ಸ್ಯಾಪ್ರು ಬೆಸಿ ಮತ್ತು ಟಿಮುರೆ ಪ್ರದೇಶಗಳು ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿವೆ. ಹಲವು ಗ್ರಾಮಗಳು ಹಾಗೂ ಮೂಲಸೌಕರ್ಯ ಯೋಜನಾ ಸ್ಥಳಗಳು ನೀರಿನಲ್ಲಿ ಕೊಚ್ಚಿಹೋಗಿರುವ ವರದಿಗಳು ಬಂದಿವೆ. ಪ್ರವಾಹದ ನೀರು ಕೆಳಭಾಗದ ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳತ್ತಲೂ ಹರಿದಿದೆ.

33 ಭದ್ರತಾ ಸಿಬ್ಬಂದಿ ನಾಪತ್ತೆ: ನೇಪಾಳದ ಅಧಿಕಾರಿಗಳ ಪ್ರಕಾರ, ನಾಪತ್ತೆಯಾಗಿರುವ 33 ಭದ್ರತಾ ಸಿಬ್ಬಂದಿಯಲ್ಲಿ 26 ಮಂದಿ ನೇಪಾಳ ಪೊಲೀಸ್ ಸಿಬ್ಬಂದಿ ಹಾಗೂ 7 ಮಂದಿ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ವೈದ್ಯಕೀಯ ತಂಡದೊಂದಿಗೆ ಎಂಐ-17 ಹೆಲಿಕಾಪ್ಟರ್‌ ಕೂಡ ಪೀಡಿತ ಪ್ರದೇಶಕ್ಕೆ ತೆರಳಿದೆ. ಆದರೆ ಪ್ರವಾಹದ ತೀವ್ರತೆ ಮತ್ತು ಭೌಗೋಳಿಕ ಪರಿಸ್ಥಿತಿಯಿಂದ ರಕ್ಷಣಾ ಕಾರ್ಯಾಚರಣೆಗೆ ಹಲವು ಸವಾಲುಗಳು ಎದುರಾಗಿವೆ.

ರಸ್ತೆಗಳು, ಸೇತುವೆ, ಜಲವಿದ್ಯುತ್ ಯೋಜನೆಗಳಿಗೆ ಹಾನಿ: ಭೋಟೆ ಕೋಶಿ ನದಿಯ ಪ್ರವಾಹದಿಂದ ಪ್ರಮುಖ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದ್ದು, ಸ್ಥಳೀಯ ವಿದ್ಯುತ್ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಸುಮಾರು 430 ಮೆಗಾವ್ಯಾಟ್ ಜಲವಿದ್ಯುತ್ ಸಾಮರ್ಥ್ಯ ಪ್ರವಾಹದಿಂದ ಬಾಧಿತವಾಗಿದೆ ಎಂದು ವರದಿಯಾಗಿದೆ.

ಭೋಟೆ ಕೋಶಿ ನದಿ ಟಿಬೆಟ್‌ನಲ್ಲಿ ಹುಟ್ಟಿ ನೇಪಾಳಕ್ಕೆ ಹರಿದು ಬರುತ್ತದೆ. ಬಳಿಕ ಇದರ ನೀರು ಟ್ರಿಶೂಲಿ ನದಿ ವ್ಯವಸ್ಥೆಯೊಂದಿಗೆ ಸೇರುತ್ತದೆ. ನದಿಯ ದಡದಲ್ಲಿ ವಾಸಿಸುವವರು ಹಾಗೂ ಕೆಳಭಾಗದ ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೇಪಾಳ ಸರ್ಕಾರ ಸೂಚಿಸಿದೆ.

ಪ್ರವಾಹಕ್ಕೆ ಕಾರಣವೇನು?: ಹಠಾತ್ ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಇದೇ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹವು ಟಿಬೆಟ್‌ನಲ್ಲಿನ ಹಿಮನದಿ ಸರೋವರದ ನೀರು ಹೊರಹರಿದ ಪರಿಣಾಮ ಉಂಟಾಗಿತ್ತು ಎಂದು ನಂತರ ಪತ್ತೆಯಾಗಿತ್ತು. ಈ ಬಾರಿಯ ಪ್ರವಾಹಕ್ಕೂ ಅದೇ ರೀತಿಯ ಕಾರಣವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರವಾಹದ ಹಿನ್ನೆಲೆಯಲ್ಲಿ ಟ್ರಿಶೂಲಿ ನದಿ ಪಾತ್ರದ ಕೆಳಭಾಗದ ಜಿಲ್ಲೆಗಳಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ನದಿ ದಡದಲ್ಲಿರುವ ಜನರು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಹಾಗೂ ಮೀನುಗಾರಿಕೆ ಸೇರಿದಂತೆ ನದಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.