SK Home Ad
Home ನಮ್ಮ ಜಿಲ್ಲೆ ಚಾಮರಾಜನಗರ ಹನೂರು ಶೂಟೌಟ್ ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆ

ಹನೂರು ಶೂಟೌಟ್ ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆ

0
79

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಆ. ೧೫ರ ಮುಂಜಾನೆ ನಡೆದ ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿ ವರ್ಗಾಹಿಸಲಾಗಿದೆ.

ಶಂಕಿತ ಬೇಟೆಗಾರರ ಮೇಲೆ ನಡೆದ ಗುಂಡಿನ ದಾಳಿ ಘಟನೆಯ ಬಳಿಕ ಅರಣ್ಯ ಇಲಾಖೆಯ ಕಚೇರಿ, ವಸತಿ ಗೃಹಗಳ ಪೀಠೋಪಕರಣಗಳ ಧ್ವಂಸ, ಕಳ್ಳಬೇಟೆ ಶಿಬಿರಗಳ ಮೇಲೆ ಜಿಲಿಟಿನ್ ಸ್ಫೋಟ, ಅರಣ್ಯಕ್ಕೆ ಬೆಂಕಿ ಹಚ್ಚಿರುವ ಘಟನೆಗಳ ಸಂಬಂಧ ನಾಲ್ಕು ಎಫ್‌ಐಆರ್ ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳ ಮುಂದುವರಿದ ತನಿಖೆಯನ್ನು ಸಿಐಡಿಗೆ ವಹಿಸಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಾದ ಡಾ.ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ಆದೇಶದಂತೆ, ಪ್ರಕರಣಗಳ ಕಡತಗಳನ್ನು ಸಂಬಂಧಪಟ್ಟ ತನಿಖಾಧಿಕಾರಿಗಳಿಂದ ಸಿಐಡಿ ತನಿಖಾಧಿಕಾರಿಗೆ ವೈಯಕ್ತಿಕವಾಗಿ ಹಸ್ತಾಂತರಿಸುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಿಐಡಿಗೆ ವರ್ಗಾವಣೆಯಾದ ಪ್ರಕರಣಗಳು: ರಾಮಾಪುರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 136/2026. ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ದಾಖಲಾದ ಪ್ರಕರಣ, ಆಗಸ್ಟ್ 15ರಂದು ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನಡೆದ ಶೂಟೌಟ್ ಘಟನೆಗೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 166/2026. ಬಿಎನ್‌ಎಸ್ ಸೆಕ್ಷನ್ 103(1)ರಡಿ ದಾಖಲಾದ ಪ್ರಕರಣ, ಹನೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 171/2026. ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳು ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984ರ ಸೆಕ್ಷನ್ 3(1)ರಡಿ ದಾಖಲಾದ ಪ್ರಕರಣ ಹಾಗೂ ಕೊಳ್ಳೇಗಾಲ ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 145/2026. ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳು ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984ರ ಸೆಕ್ಷನ್ 3(1)ರಡಿ ದಾಖಲಾಗಿರುವ ಪ್ರಕರಣಗಳ ಮುಂದುವರಿದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಸಮಗ್ರ ತನಿಖೆ ಬಳಿಕ ಸತ್ಯಾಸತ್ಯತೆ ಬಯಲು: ಪ್ರಕರಣಗಳ ಮುಂದಿನ ತನಿಖೆಯನ್ನು ಸಿಐಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಮೂಲಕ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ವಿವರವಾದ ವರದಿಯನ್ನು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಮಗ್ರ ತನಿಖೆ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬೀಳೋ ನಿರೀಕ್ಷೆ ಇದೆ.

ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು, ಕುಟುಂಬಸ್ಥರ ಆಕ್ಷೇಪಗಳು ಹಾಗೂ ತನಿಖೆಯ ಕುರಿತು ವಿವಿಧ ಬೇಡಿಕೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿರುವುದು ಮಹತ್ವ ಪಡೆದುಕೊಂಡಿದೆ.