ಬೆಂಗಳೂರು: “2028ರ ಚುನಾವಣೆ ಹೇಗೆ ಎದುರಿಸಬೇಕು ನನಗೆ ಗೊತ್ತಿದೆ. ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು. ಜನರ ಸೇವೆ ಮಾಡುವಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ಯಾರೂ ಶಾಶ್ವತವಲ್ಲ. ನಾವು ವಿರೋಧ ಪಕ್ಷಕ್ಕೆ ಹೋಗಬಹುದು, ವಿರೋಧ ಪಕ್ಷದವರು ಇಲ್ಲಿಗೆ ಬರಬಹುದು. ಜನರು ನಮ್ಮೆಲ್ಲರನ್ನು ಆಯ್ಕೆ ಮಾಡಿರುವುದು ರಾಜ್ಯದ ಹಿತ ಕಾಪಾಡಲು ಎಂದರು.
ಸಭಾಧ್ಯಕ್ಷರ, ಸ್ಥಾನದಲ್ಲಿ ಕುಳಿತಿರುವ ಟಿ ಬಿ ಜಯಚಂದ್ರ ಅವರು ಹಿರಿಯರು. ಆ ಸ್ಥಾನದ ಮಹಿಮೆ ದೊಡ್ಡದು. ಅದನ್ನು ಅಲಂಕರಿಸಿದ ಕೃಷ್ಣ ಅವರು ಸಿಎಂ ಆದರು, ಅಲ್ಲಿ ಕುಳಿತಿದ್ದ ಜಗದೀಶ್ ಶೆಟ್ಟರ್ ಅವರು ಸಿಎಂ ಆದರು. ಖಾದರ್ ಅವರು ಅಲ್ಲಿ ಕೂತು ಈಗ ಡಬಲ್ ಇಲಾಖೆ ಧಮಾಕದೊಂದಿಗೆ ಇಲ್ಲಿ ಕೂತಿದ್ದಾರೆ. ಎಲ್ಲರೂ ಭರವಸೆಯಿಂದ ಇರೋಣ ಎಂದರು.
ಈ ಸದನಕ್ಕೆ ನಮ್ಮ ಸಚಿವರನ್ನು ವಿರೋಧ ಪಕ್ಷದವರಿಗೆ ಪರಿಚಯಿಸಬೇಕು ಎಂಬುದು ನಮ್ಮ ಆಸೆ. ಆದರೆ ಅವರು ಇಲ್ಲಿ ಇಲ್ಲ. ಟಿವಿ ಮೂಲಕ ಇದನ್ನು ನೋಡುತ್ತಿರಬಹುದು ಎಂದು ತಮ್ಮ ಸಚಿವರನ್ನು ಸದನಕ್ಕೆ ಪರಿಚಯಿಸಿದರು.
ನನ್ನ ಅಧಿಕಾರವನ್ನು ಯಾರ ವಿರುದ್ಧಯೂ ಬಳಸುವುದಿಲ್ಲ: “ನಾವು ಇಷ್ಟೂ ಜನ ಯಾರ ಮೇಲೂ ದ್ವೇಷ ಮಾಡದೇ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಂದಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಸಚಿವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಬಯಸುತ್ತೇವೆ. ನೀರಾವರಿ ವಿಚಾರದಲ್ಲಿ ಪ್ರಹ್ಲಾದ್ ಜೋಷಿ ಅವರು ನಮಗೆ ಕೊಟ್ಟ ಸಹಕಾರವನ್ನು ನಾವು ಅಭಿನಂದಿಸುತ್ತೇವೆ. ಇನ್ನು ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಅತಿ ದೊಡ್ಡ ಖಾತೆಯನ್ನು ಹೊಂದಿದ್ದಾರೆ. ಅವರು ರಾಜ್ಯದ ಜನರಿಗೆ 25 ಸಾವಿರ ಉದ್ಯೋಗ ಕಲ್ಪಿಸಬಹುದು. ಅವರು ಎಲ್ಲಿ ಜಾಗ ಕೇಳುತ್ತಾರೋ ಅಲ್ಲಿ ಕೊಡೋಣ. ಎಷ್ಟೇ ಆದರೂ ನಮ್ಮ ನಾಡಿನ ಜನರಿಗೆ ಉದ್ಯೋಗ ಕಲ್ಪಿಸುವುದು ಮುಖ್ಯ ಅಲ್ಲವೇ? ಅವರು ನನ್ನ ಬಗ್ಗೆ ಎಷ್ಟೇ ಬೇಸರ ಹೊಂದಿದ್ದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧ” ಎಂದು ತಿಳಿಸಿದರು.
ಹೆಚ್ಚು ಗೆಳೆಯರನ್ನು ಗಳಿಸುವ ಆಸೆ: “ಅಧಿಕಾರದಲ್ಲಿ ನಾವು ಎರಡನ್ನು ಸಂಪಾದಿಸಬಹುದು. ಒಂದು ಅತಿ ಹೆಚ್ಚು ಮಿತ್ರರು ಅಥವಾ ಅತಿ ಹೆಚ್ಚು ಶತ್ರುಗಳು. ನಾನು ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುತ್ತೇನೆ. ಎಲ್ಲರಿಗೂ ನೆರವು ನೀಡಲು ಬಯಸುತ್ತೇನೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ. ನನ್ನ 40 ವರ್ಷಗಳ ರಾಜಕೀಯದಲ್ಲಿ ಏಳು ಬೀಳುಗಳನ್ನು ಕಂಡಿದ್ದು, ನನ್ನದೇ ಆದ ಅನುಭವದಲ್ಲಿ ಹೊಸ ಆಲೋಚನೆಗಳನ್ನು ಹೊಂದಿದ್ದೇನೆ. ನನ್ನ ಈ ಸ್ಥಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗುವಂತಾಗಬೇಕು. ಸಿದ್ದರಾಮಯ್ಯ ಅವರು 8 ವರ್ಷಗಳ ಕಾಲ ಕೊಟ್ಟ ಭಾಗ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿದರು.






















