ಜಿಲ್ಲಾಧಿಕಾರಿ ಫೋಟೋ ಬಳಸಿ ವಾಟ್ಸಪ್ ವಂಚನೆ: ಆಹಾರ ಇಲಾಖೆ ಉಪನಿರ್ದೇಶಕರಿಗೆ ₹50 ಸಾವಿರ ವಂಚನೆ
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯಾಗಿದೆ ಎಂಬ ನೆಪವೊಡ್ಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಂದ ₹50 ಸಾವಿರ ಪಡೆದು ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ವಂಚನೆಗೆ ಒಳಗಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ ಅವರು ಆಗಸ್ಟ್ 10ರಂದು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಆಗಸ್ಟ್ 8ರಂದು ಮಧ್ಯಾಹ್ನ ಯೋಗಾನಂದ ಅವರು ಮಂಡ್ಯ ಜಿಲ್ಲೆಯ ನಾಗಮಂಗಲದ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಮೊಬೈಲ್‌ಗೆ ವಾಟ್ಸಪ್ ಸಂದೇಶವೊಂದು ಬಂದಿದೆ. ಸಂದೇಶ ಕಳುಹಿಸಿದ್ದ ವಾಟ್ಸಪ್ ಖಾತೆಯ ಡಿಪಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರ ಫೋಟೋ ಇದ್ದು, ಖಾತೆಯಲ್ಲಿ ‘ಬನ್ವರ್ ಸಿಂಗ್ ಮೀನಾ’ ಎಂಬ ಹೆಸರು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಸಂದೇಶ ಕಳುಹಿಸಿದ್ದ ವ್ಯಕ್ತಿ ತಾನು ಸಭೆಯಲ್ಲಿರುವುದಾಗಿ ಹಾಗೂ ತನ್ನ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಯೋಗಾನಂದ ಅವರಿಗೆ ತಿಳಿಸಿದ್ದಾನೆ. ತುರ್ತಾಗಿ ಮತ್ತೊಬ್ಬರ ಬ್ಯಾಂಕ್ ಖಾತೆಗೆ ₹50 ಸಾವಿರ ಹಣ ಜಮೆ ಮಾಡುವಂತೆ ಮನವಿ ಮಾಡಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸರಿಯಾದ ಬಳಿಕ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ.
ಜಿಲ್ಲಾಧಿಕಾರಿ ಅವರ ಫೋಟೋ ಮತ್ತು ಹೆಸರನ್ನು ಬಳಸಿದ್ದರಿಂದ ಸಂದೇಶ ನಿಜವೆಂದು ನಂಬಿದ ಯೋಗಾನಂದ ಅವರು, ಮನೆಯಲ್ಲಿದ್ದ ₹50 ಸಾವಿರ ನಗದನ್ನು ತೆಗೆದುಕೊಂಡು ಮಂಡ್ಯ ನಗರದ ಐಸಿಐಸಿಐ ಬ್ಯಾಂಕ್ ಎಟಿಎಂಗೆ ತೆರಳಿದ್ದಾರೆ. ಬಳಿಕ ಆರೋಪಿಯು ನೀಡಿದ್ದ ಹೇಮಣ್ಣಗೌಡ ಗುಡ್ಡಣ್ಣಗೌಡ ಪಾಟೀಲ್ ಅವರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು ₹50 ಸಾವಿರ ಹಣವನ್ನು ಜಮೆ ಮಾಡಿದ್ದಾರೆ.
ಇದಾದ ಬಳಿಕವೂ ಆರೋಪಿಯ ಕಡೆಯಿಂದ ಮತ್ತಷ್ಟು ₹50 ಸಾವಿರ ಹಣವನ್ನು ಜಮೆ ಮಾಡುವಂತೆ ಸಂದೇಶ ಬಂದಿದ್ದು, ಈ ವೇಳೆ ಯೋಗಾನಂದ ಅವರಿಗೆ ಅನುಮಾನ ಮೂಡಿದೆ. ತಕ್ಷಣ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಪಿಎ ಅವರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ.
ಆಗ ಜಿಲ್ಲಾಧಿಕಾರಿ ಯಾವುದೇ ಸಭೆಯಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೆ, ಇದೇ ರೀತಿಯಲ್ಲಿ ಜಿಲ್ಲಾಧಿಕಾರಿ ಹೆಸರಿನಲ್ಲಿ ಬೇರೆ ವ್ಯಕ್ತಿಗಳಿಗೂ ವಾಟ್ಸಪ್ ಸಂದೇಶಗಳು ಬರುತ್ತಿವೆ ಎಂಬ ಮಾಹಿತಿ ಯೋಗಾನಂದ ಅವರಿಗೆ ಲಭ್ಯವಾಗಿದೆ. ಇದರಿಂದ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಅವರಿಗೆ ಖಚಿತವಾಗಿದೆ.
ನಂತರ ಚಿಕ್ಕಮಗಳೂರಿಗೆ ಮರಳಿದ ಯೋಗಾನಂದ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು : ಈ ಸಂಬಂಧ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸರು ಠಾಣಾ ಮೊ.ನಂ. 42/2026ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಅವರ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ ಅಧಿಕಾರಿಯನ್ನೇ ವಂಚಿಸಿರುವ ಪ್ರಕರಣವಾಗಿರುವುದರಿಂದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರಗಳು, ವಾಟ್ಸಪ್ ಖಾತೆಯ ಬಳಕೆ, ಮೊಬೈಲ್ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಬರುವ ಹಣದ ಬೇಡಿಕೆಯ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ವ್ಯಕ್ತಿಯ ಫೋಟೋ ಅಥವಾ ಹೆಸರು ವಾಟ್ಸಪ್ ಡಿಪಿಯಲ್ಲಿ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಖಾತೆ ಅಧಿಕೃತವೆಂದು ನಂಬದೆ, ನೇರವಾಗಿ ಸಂಬಂಧಪಟ್ಟ ವ್ಯಕ್ತಿಯನ್ನು ಅಥವಾ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಂಡ ಬಳಿಕವೇ ಹಣಕಾಸಿನ ವ್ಯವಹಾರ ನಡೆಸುವುದು ಸುರಕ್ಷಿತವಾಗಿದೆ.






















