SK Home Ad
Home ನಮ್ಮ ಜಿಲ್ಲೆ ಹಾಸನ ಮಣ್ಣಿನಲ್ಲಿ ಮರೆಯಾದ ಚೆನ್ನಮ್ಮ: ಸರ್ಕಾರಿ ಗೌರವದೊಂದಿಗೆ ವಿದಾಯ

ಮಣ್ಣಿನಲ್ಲಿ ಮರೆಯಾದ ಚೆನ್ನಮ್ಮ: ಸರ್ಕಾರಿ ಗೌರವದೊಂದಿಗೆ ವಿದಾಯ

0
187

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಹರದನಹಳ್ಳಿ ಸಮೀಪದ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೆರವೇರಿಸಲಾಯಿತು. ಕುಟುಂಬಸ್ಥರು, ರಾಜಕೀಯ ನಾಯಕರು, ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಅಂತ್ಯಕ್ರಿಯೆಗೆ ಮುನ್ನ ವಿವಿಧ ಪಕ್ಷಗಳ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಪುಷ್ಪನಮನ ಸಲ್ಲಿಸಿದರು. ಬಳಿಕ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನುಡಿಸುವ ಮೂಲಕ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.

ಎರಡು ನಿಮಿಷಗಳ ಮೌನಾಚರಣೆ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು.

ನಂತರ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಅರ್ಚಕರ ನೇತೃತ್ವದಲ್ಲಿ ದೇಹ ಶುದ್ಧೀಕರಣ, ಸ್ತೋತ್ರ ಪಠಣ ಹಾಗೂ ಅಂತಿಮ ಪೂಜಾ ಕಾರ್ಯಗಳು ನಡೆದವು. ದೇವೇಗೌಡರು ಹಾಗೂ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು.

ಬಳಿಕ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಮೂರು ಸುತ್ತು ಮೆರವಣಿಗೆ ನಡೆಸಿ, ಹಿರಿಯ ಪುತ್ರ ಎಚ್.ಡಿ. ರಮೇಶ್ ಅವರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಗುಂಡಿಯಲ್ಲಿ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ಮಾಡಿದ ಬಳಿಕ ಪಾರ್ಥಿವ ಶರೀರವನ್ನು ಸಮಾಧಿಗಿಳಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.