ಕುಷ್ಟಗಿ: ಪಟ್ಟಣದ ಬಸವನಗರದಲ್ಲಿ ಬುಧವಾರ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಕಟ್ಟಡ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ. ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಟ್ರಾನ್ಸ್‌ಫಾರ್ಮರ್‌ನ ತೆರೆದ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ನವಲಹಳ್ಳಿ ಗ್ರಾಮದ ಹನುಮಂತ ಹನುಮಪ್ಪ ಪೂಜಾರಿ (50) ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಬಸವನಗರದಲ್ಲಿರುವ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ನಿವಾಸದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಹನುಮಂತ ಪೂಜಾರಿ ಅವರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಟ್ರಾನ್ಸ್‌ಫಾರ್ಮರ್‌ನ ಫ್ಯೂಸ್ ಭಾಗದಲ್ಲಿದ್ದ ತೆರೆದ ವಿದ್ಯುತ್ ತಂತಿ ಅವರ ತಲೆಗೆ ಸ್ಪರ್ಶಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ: ಅಯೋಧ್ಯೆಯ ರಾಮ ಮಂದಿರ ಗುರಿಯಾಗಿತ್ತೇ?
ವಿದ್ಯುತ್ ಪ್ರವಾಹದ ತೀವ್ರತೆಗೆ ಅವರು ಕ್ಷಣಾರ್ಧದಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕಂಡ ಸ್ಥಳೀಯರು ಮತ್ತು ಸಹ ಕಾರ್ಮಿಕರು ತಕ್ಷಣ ನೆರವಿಗೆ ಧಾವಿಸಿದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಕುಟುಂಬದ ಆಧಾರಸ್ತಂಭ ಕಳೆದುಕೊಂಡ ಕುಟುಂಬ : ಮೃತ ಹನುಮಂತ ಪೂಜಾರಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಅವರ ನಿಧನದಿಂದ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ಸದಸ್ಯರ ಆಕ್ರಂದನ ಕಂಡು ಸ್ಥಳದಲ್ಲಿದ್ದವರ ಕಣ್ಣಲ್ಲೂ ನೀರು ತುಂಬಿತ್ತು. ದುಡಿದು ಕುಟುಂಬದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಕೆಲಸದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವುದು ಗ್ರಾಮಸ್ಥರಲ್ಲೂ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ
ಜೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ : ಘಟನೆಯ ಬಳಿಕ ಸ್ಥಳೀಯರು ಜೆಸ್ಕಾಂ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯಕಾರಿಯಾದ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಸಮರ್ಪಕ ಸುರಕ್ಷತಾ ಬೇಲಿ, ಎಚ್ಚರಿಕೆ ಫಲಕ ಹಾಗೂ ನಿರ್ವಹಣಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಪಟ್ಟಣ ಮತ್ತು ಗ್ರಾಮೀಣ ಭಾಗಗಳ ಅನೇಕ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಹಾಳಾದ ಬೇಲಿಗಳು ಹಾಗೂ ನಿರ್ವಹಣೆಯ ಕೊರತೆ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!
ಸಮಗ್ರ ತನಿಖೆಗೆ ಆಗ್ರಹ : ಅವಘಡಕ್ಕೆ ನಿಖರ ಕಾರಣವೇನು, ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿದೆಯೇ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ ಇದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದರ ಜೊತೆಗೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಅಥವಾ ಗುತ್ತಿಗೆ ಆಧಾರಿತ ಉದ್ಯೋಗ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಈ ದುರಂತ ವಿದ್ಯುತ್ ಸುರಕ್ಷತಾ ಕ್ರಮಗಳ ಅನುಷ್ಠಾನ ಮತ್ತು ಸಾರ್ವಜನಿಕ ಕಾಮಗಾರಿಗಳ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.






















