SK Home Ad
Home ಕ್ರೀಡೆ BCCI ಆಯ್ಕೆಗಾರರಿಗೆ ವೈಭವ್ ಕಡಕ್ ಸಂದೇಶ: ಕೇವಲ ಟಿ20 ಮಾತ್ರವಲ್ಲ; ಒನ್‌ಡೇ ಕ್ರಿಕೆಟ್‌ಗೂ ನಾನು ಸಿದ್ಧ!

BCCI ಆಯ್ಕೆಗಾರರಿಗೆ ವೈಭವ್ ಕಡಕ್ ಸಂದೇಶ: ಕೇವಲ ಟಿ20 ಮಾತ್ರವಲ್ಲ; ಒನ್‌ಡೇ ಕ್ರಿಕೆಟ್‌ಗೂ ನಾನು ಸಿದ್ಧ!

0
62

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ತಮ್ಮ ಅಬ್ಬರ ಶುರುಮಾಡಿದ್ದಾರೆ. ಶ್ರೀಲಂಕಾ ‘ಎ’ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚುವ ಮೂಲಕ ಬಿಸಿಸಿಐ ಆಯ್ಕೆಗಾರರಿಗೆ ತಾವೂ ಹಿರಿಯರ ಏಕದಿನ ತಂಡಕ್ಕೂ ಸಿದ್ಧ ಎನ್ನುವ ನೇರ ಸಂದೇಶ ರವಾನಿಸಿದ್ದಾರೆ.

ಐಪಿಎಲ್ ಮುಕ್ತಾಯದ ಬೆನ್ನಲ್ಲೇ ವೈಭವ್ ‘ಟಿ20 ಸ್ಪೆಷಲಿಸ್ಟ್’ ಎಂಬ ಮುದ್ರೆ ಒತ್ತಲಾಗಿತ್ತು. ಆದ್ರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವೈಭವ್, “ಜನರಿಗೆ ಇದರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ… ನಾನು 50 ಓವರ್‌ಗಳ (ಏಕದಿನ) ಕ್ರಿಕೆಟ್‌ನ್ನು ತುಂಬಾ ಆಡಿದ್ದೇನೆ” ಎಂದು ನೆನಪಿಸುವ ಮೂಲಕ ತಮಗಿರುವ ಏಕದಿನ ಕ್ರಿಕೆಟ್‌ನ ಅನುಭವವನ್ನು ಸ್ಪಷ್ಟಪಡಿಸಿದ್ದಾರೆ.

ದಾಖಲೆಯ ಪ್ರಚಂಡ ಬ್ಯಾಟಿಂಗ್: ದಂಬುಲ್ಲಾದಲ್ಲಿ ನಡೆದ ಈ ಮುಖಾಮುಖಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ‘ಲಿಸ್ಟ್ ಎ’ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ಐತಿಹಾಸಿಕ ದಾಖಲೆ ಬರೆದರು. ಒಟ್ಟಾರೆ 29 ಎಸೆತಗಳನ್ನು ಎದುರಿಸಿದ ವೈಭವ್‌ 10 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 324.14 ರ ಸ್ಟ್ರೈಕ್ ರೇಟ್‌ನಲ್ಲಿ 94 ರನ್ ಕಲೆಹಾಕಿದರು.

ವೈಭವ್ ಈ ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಭಾರತ ‘ಎ’ ತಂಡ 50 ಓವರ್‌ಗಳಲ್ಲಿ 377/9 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ‘ಎ’ ತಂಡ 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 66 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಒಟ್ಟಾರೆಯಾಗಿ.. ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಸದ್ಯದ ಭಾರತ ಏಕದಿನ ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಒನ್ಡೇ ಟೀಮ್ ಸೇರಲು ಇನ್ನು ಕೆಲವು ದಿನ ಕಾಯಬೇಕಿದೆ. ಹಾಗೇ ಐರ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದು, ಕಣಕ್ಕಿಳಿದರೆ 15ನೇ ವಯಸ್ಸಿನಲ್ಲಿ ಭಾರತದ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.