ಸತ್ಸಂಗತಿಯ ಬಗ್ಗೆ ಎಲ್ಲ ಹಿರಿಯರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಭರ್ತೃಹರಿಯ ನೀತಿಶತಕದಲ್ಲಿ ಹೇಳಿರುವ ಮಾತು ಅನೇಕ ಅಂಶಗಳನ್ನು ಒಳಗೊಂಡಿದೆ.ಜಾಡ್ಯಂ ಧಿಯೋ ಹರತಿ ವಾಚಿ ಸತ್ಯಂ | ಮಾನೋನ್ನತಿಂ ದಿಶತಿಪಾಪಮಪಾಕರೋತಿ || ಚೇತಃ ಪ್ರಸಾದಯತಿ ದಿಕ್ಷುತನೋತಿಕೀರ್ತಿಂ | ಸತ್ಸಂಗತಿಃಕಥಯ ಕಿಂ ನ ಕರೋತಿ ಪುಂಸಾಮ್ ||' ಸತ್ಸಂಗತಿ ಎಂದರೆ ಮಹಾತ್ಮರ ಸಹವಾಸ. ಅಧ್ಯಾತ್ಮ ಪಥದಲ್ಲಿ ಮುಂದುವರಿದಿರುವ ವಿಶಿಷ್ಟ ವ್ಯಕ್ತಿಗಳನ್ನು ಮಹಾತ್ಮರೆಂದು ಕರೆಯುತ್ತಾರೆ. ಅವರ ಸಹವಾಸದಿಂದ ಸಿಗುವ ಪ್ರಯೋಜನಗಳನ್ನು ಭರ್ತೃಹರಿ ಇಲ್ಲಿ ಪಟ್ಟಿ ಮಾಡಿದ್ದಾನೆ.
ಜಾಡ್ಯಂ ಧಿಯೋ ಹರತಿ’- ಮಹಾತ್ಮರ ಸಹವಾಸದಿಂದ ಬುದ್ಧಿಯ ಜಾಡ್ಯ ಹೋಗುತ್ತದೆ. ಹೆಚ್ಚು ವಿವೇಚನೆಗೆ ಹೋಗದೆ ಸಂಕುಚಿತ ವಿಷಯದಲ್ಲಿಯೆ ನಿಂತಿರುವಿಕೆ ಬುದ್ಧಿಯ ಜಾಡ್ಯ. ಕೂಪ ಮಂಡೂಕ ವೃತ್ತಿ ಎಂಬುದಾಗಿ ಇದನ್ನು ಕರೆಯುತ್ತಾರೆ. ಉದಾಹರಣೆಗೆ ದೇವರು ಮೂರ್ತಿ ರೂಪದಿಂದ ಮಾತ್ರ ಇದ್ದಾನೆ ಎಂಬ ಭಾವನೆ. ಹೀಗೆ ಆಲೋಚಿಸುವವರ ದೃಷ್ಟಿಯಲ್ಲಿ ದೇವರು ಒಂದು ಜಡ ವಸ್ತು ಮಾತ್ರ. ಇಂತಹ ಸಂಕುಚಿತ ಆಲೋಚನೆಗಳು ಮಹಾತ್ಮರ ನಡತೆಯಿಂದ ಮತ್ತು ಮಾತಿನಿಂದ ಪರಿಹಾರಗೊಳ್ಳುತ್ತದೆ. ಮಹಾತ್ಮರು ತನ್ನೊಳಗೆ ಹಾಗೆ ಎಲ್ಲರೊಳಗೆ ದೇವರನ್ನು ಕಾಣುತ್ತಿರುತ್ತಾರೆ. ಮಾತಿನಿಂದಲೂ ಅದನ್ನೆ ಹೇಳುತ್ತಿರುತ್ತಾರೆ. ಮೂರ್ತಿಯ ಬಗ್ಗೆ ಶ್ರದ್ಧೆಯೊಂದಿಗೆ ಇವುಗಳನ್ನು ಮಾಡುತ್ತಾರೆ. ಅವರ ಈ ಪ್ರವೃತ್ತಿಯನ್ನು ಶ್ರದ್ಧೆಯಿಂದ ಗಮನಿಸಿದಾಗ ಸಂಕುಚಿತ ಬುದ್ಧಿ ನಿವಾರಣೆಯಾಗುತ್ತದೆ.ಸಿಂಚತಿ ವಾಚಿ ಸತ್ಯಂ' : ಪರಮಾರ್ಥದಕಡೆ ಸ್ವಲ್ಪವೂ ಗಮನ ಹರಿಸದೆ ಲೌಕಿಕ ವ್ಯವಹಾರಗಳಲ್ಲೆ ನಿರತರಾದವರಿಗೆ ಮಾತಿನಲ್ಲಿ ಸುಳ್ಳುಗಳು ಸಹಜವಾಗಿ ಸುಳಿಯುತ್ತವೆ. ಎಷ್ಟೋ ಸಲ ಅವು ಸುಳ್ಳೆಂಬುದಾಗಿ ಮೇಲ್ನೋಟಕ್ಕೆ ಅನಿಸುವುದಿಲ್ಲ. ಮಹಾತ್ಮರ ಸಹವಾಸದಿಂದ ಆತ್ಮವಿಮರ್ಶೆಯ ಪ್ರವೃತ್ತಿ ಬೆಳೆಯುತ್ತದೆ. ಆಗ ತನ್ನ ಮಾತಿನಲ್ಲಿರುವ ಅಸತ್ಯಗಳು ಪತ್ತೆಯಾಗುತ್ತವೆ. ಯಾಕೆಂದರೆ ಮಹಾತ್ಮರು ತಮ್ಮ ಎಲ್ಲ ಮಾತಿನಲ್ಲಿಯೂ ಅಸತ್ಯಗಳು ಸ್ವಲ್ಪವೂ ನುಸುಳದಂತೆ ಎಚ್ಚರಿಕೆಯನ್ನು ತಮ್ಮ ಸಹಜ ನಡತೆಯಲ್ಲಿಯೇ ಇಟ್ಟುಕೊಂಡಿರುತ್ತಾರೆ.
ಮಾನೋನ್ನತಿಂ ದಿಶತಿ’ : ನಮ್ಮ ಗೌರವವನ್ನು ಮಹಾತ್ಮರ ಸಹವಾಸ ಹೆಚ್ಚಿಸುತ್ತದೆ. ದುರ್ಜನರ ಸಹವಾಸ ಗೌರವವನ್ನು ಕಡಿಮೆ ಮಾಡುತ್ತದೆ. ಪಾಪಮಪಾಕರೋತಿ' : ಮಹಾತ್ಮರಿರುವ ವಾತಾವರಣಕ್ಕೆ ಪಾಪವನ್ನು ಸವೆಸುವ ಸಾಮರ್ಥ್ಯವಿದೆ. ಇನ್ನು ಅವರ ಜೊತೆ ಇರುವಾಗ ನಮ್ಮ ಮನಸ್ಸು ಪುಣ್ಯಪ್ರದವಾದ ಸಚ್ಚಿಂತನೆಯನ್ನೆ ಮಾಡುವುದರಿಂದ ಪಾಪಗಳು ಕ್ಷಯಿಸುತ್ತವೆ.
ಚೇತಃಪ್ರಸಾದಯತಿ’ : ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಸಂಸಾರದ ಚಿಂತೆಯಿಂದ ಅಪ್ರಸನ್ನಗೊಂಡ ಮನಸ್ಸು ಮಹಾತ್ಮರ ಜೊತೆಗೆ ಇರುವಾಗ ಪ್ರಸನ್ನಗೊಳ್ಳುತ್ತದೆ (ಶಾಂತಗೊಳ್ಳುತ್ತದೆ). `ದಿಕ್ಷುತನೋತಿಕೀರ್ತಿಂ’ : ಮಹಾತ್ಮರ ಸಹವಾಸ ಪಡೆದ ವ್ಯಕ್ತಿಗಳು ಶ್ರೇಷ್ಠ ಸಾಧನೆಗಳನ್ನು
ಮಾಡಲು ಸಮರ್ಥರಾಗುತ್ತಾರೆ. ಆ ಮೂಲಕ ಕೀರ್ತಿಯನ್ನು
ಪಡೆಯುತ್ತಾರೆ.
ಇಷ್ಟೇ ಹೇಳಿದರೆ ಭರ್ತೃಹರಿಗೆ ತೃಪ್ತಿಯಿಲ್ಲ. ಅದಕ್ಕೆ ಅವನ ಕೊನೇಯ ಮಾತು: ಮಹಾತ್ಮರ ಸಹವಾಸದಿಂದ ಸಿಗದೆ ಇದ್ದದ್ದು ಯಾವುದು ?