ಪ್ರತಿಯೊಬ್ಬ ತರುಣನು ಈ ಮಾತನ್ನು ಸೂಕ್ಷ್ಮಮತೆಯಿಂದ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ನಾವು ನೋಡಿಕೊಳ್ಳುತ್ತಿರದೇನೆಂದರೆ ಯುವಕರು ಹೆಚ್ಚಾಗಿ ಸೋಮಾರಿಗಳಾಗಿ ತಂದೆ ತಾಯಿಗಳಿಗೆ ಭಾರವಾಗುವದನ್ನು ಕಾಣುತ್ತೇವೆ. ದುಡಿದು ತಿಂದ ಅನ್ನ ನಮ್ಮ ಶರೀರದ ಜೊತೆ ಆತ್ಮಶುದ್ಧಿಯನ್ನಾಗಿಸುತ್ತದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿ ಕಲ್ಯಾಣದ ಪ್ರತಿಯೊಬ್ಬ ಶರಣ ಶರಣಿಯರಿಗೆ ಕಾಯಕ ಮಾಡಲು ಪ್ರೇರಣೆ ನೀಡುತ್ತಿದ್ದರು. ನಮ್ಮ ಸ್ವಂತ ಶಕ್ತಿಯ ಮೇಲೆ ಅವಲಂಬಿತರಾಗಿ ದುಡಿದು ಉಣ್ಣುವ ಛಲ ಬೆಳೆಸಿಕೊಳ್ಳಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಬದುಕುವದು ಅದು ಗಂಡಸರ ಲಕ್ಷಣವಲ್ಲ. ದುಡಿತವೇ ದುಡ್ಡಿನ ತಾಯಿ ಎಂದು ಅನುಭಾವಿಗಳು ಹೇಳಿದ್ದಾರೆ.
ಸಾಹಿತಿ ಸಿದ್ದಯ್ಯ ಪುರಾಣಿಕರು ತಮ್ಮ ಪದ್ಯದ ನಾಲ್ಕು ಸಾಲುಗಳಲ್ಲಿ ಉತ್ತಮ ಸಂದೇಶ ನೀಡಿದ್ದಾರೆ.
ಮಂದಿ ಕೊಂಡುದು ತಿಂದು ಬದುಕಲೊಪ್ಪದು. ತಿಂದುಳಿದ ಎಂಜಲವು ತಿನ್ನುವದು ಹಂದಿ ಬದುಕಿದರೆ ಬದುಕೊಂದು ದಿನ ಹೆಬ್ಬುಲಿಯಂತೆ ಹಂದಿಯಾಗಿರಬೇಡ ಮರುಳಸಿದ್ಧ ಎಂದು ಬಹಳ ಉದಾತ್ತವಾದ ಸಲಹೆ ತರುಣರಿಗೆ ನೀಡಿದ್ದಾರೆ. ನಾವೆಲ್ಲರೂ ದುಡಿದು ಉಣ್ಣುವ ಗುಣ ಅಳವಡಿಸಿಕೊಂಡು ಬದುಕಿದರೆ ನಮ್ಮ ಮನೆ ನಮ್ಮ ಕುಟುಂಬಕ್ಕೆ ಉತ್ತಮರು ಹಾಗೂ ನಮ್ಮ ಸಮಾಜದಲ್ಲಿಯೂ ಉತ್ತಮರಾಗಲು ಸಾಧ್ಯ. ಕರ್ ಮೆಹನತ್ ಖಾ ನ್ಯಾಮತ್ ಅಂತ ಉರ್ದು ಗಾದೆ ಇದೆ ಇದರರ್ಥ ಕೈ ಕೆಸರಾದರೆ ಬಾಯಿ ಮೊಸರು ಎಂಬರ್ಥ ಇನ್ನೊಬ್ಬರು ದುಡಿದು ತಂದು ಹಾಕಿದ್ದು ತಿಂದು ಹಾಕುವ ಸ್ವಭಾವ ನಮ್ಮಲ್ಲಿ ಇರಬಾರದು. ನಮ್ಮ ನಮ್ಮ ಶಕ್ತಿ ಬುದ್ಧಿಗನುಸಾರವಾಗಿ ಆದಷ್ಟು ದುಡಿದು ತಿನ್ನುವ ಗುಣ ಬೆಳೆಸಿಕೊಳ್ಳಬೇಕು.ಪ್ರತಿಯೊಬ್ಬ ಯುವಕ ಇನ್ನೊಬ್ಬರು ದುಡಿದದ ತುತ್ತು ಉಣ್ಣದೇ ತಾನೇ ಸ್ವತಃ ದುಡಿದು ತನ್ನ ಕುಟುಂಬದ ಜತೆಗೆ ಇನ್ನೊಬ್ಬರಿಗೂ ಸಹಕಾರಿಯಾಗಲು ಸಾಧ್ಯ.
ಬಾಪ್ ಕಿ ಕಮಾಯಿಸೇ ಭಲಿ ಆಪಕಿ ಕಮಾಯಿ
ಅಪ್ಪನ ದುಡಿಮೆಯಲ್ಲಿ ತಿನ್ನುವದಕ್ಕಿಂತ ಸ್ವಂತ ದುಡಿದು ತಿನ್ನುವದು ಲೇಸು. ಖರ್ಚು ಮಾಡುವಾಗ ಯಾವ ಆತಂಕಗಳು ಇರುವದಿಲ್ಲ. ಆದರೆ ತಾನು ದುಡಿದು ಗಳಿಸಿದ ದುಡ್ಡು ಖರ್ಚು ಮಾಡುವಾಗ ದುಡ್ಡಿನ ಬೆಲೆ ಅವನಿಗೆ ಅರ್ಥವಾಗುತ್ತದೆ.