ಅಗ್ರಣಿತ್ವ: ಅಗ್ನಿ

0
23
PRATHAPPHOTOS.COM

ಯಾಕೆ ಭಗವಂತನನ್ನು ಅಗ್ನಿ ಎಂಬುದಾಗಿ ಕರೆಯುತ್ತಾರೆ. ಅಗ್ರನಾಯಕನಾಗಿದ್ದರಿಂದ ಭಗವಂತ ಅಗ್ನಿ. ಪ್ರತಿಯೊಂದು ಕಾರ್ಯಗಳಲ್ಲಿಯೂ ಮೊಟ್ಟ ಮೊದಲಿಗೆ ಪ್ರಾರಂಭ ಮಾಡಿ ದಾರಿಯನ್ನು ತೋರುವವನು ಭಗವಂತ. ಒಬ್ಬರು ಮಾಡಿದ್ದನ್ನು ಮುಂದುವರಿಸಿಕೊಂಡು ಹೋಗುವುದು ಸುಲಭ. ಯಾವುದೇ ಕಾರ್ಯವನ್ನು ಮೊಟ್ಟ ಮೊದಲು ಮಾಡುವುದಿದೆಯಲ್ಲ ಅದು ಕಷ್ಟ.
ಕಷ್ಟ ಎಂದರೆ ದೇವರಿಗೆ ಕಷ್ಟ ಅಂತ ಆಗುವುದಿಲ್ಲ. ವ್ಯವಹಾರದ ದೃಷ್ಟಿಯಲ್ಲಿ ಉಳಿದವರಿಗೆ ಅಂದರೆ ಸಾಮಾನ್ಯರಿಗೆ ಅದು ಅಸಾಧ್ಯ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಗೌರವ ಕೊಡಬೇಕಾದರೆ ನಮಸ್ಕಾರ ಮಾಡಬೇಕಾಗುತ್ತದೆ. ನಮಸ್ಕಾರವನ್ನು ಹೇಗೆ ಮಾಡಬೇಕು ಎಂದರೆ ಕೈ ಮುಗಿಯೋದು ಅಥವಾ ಬಗ್ಗಿ ನಮಸ್ಕಾರ ಮಾಡಿದರೆ ಗೌರವ ಸೂಚನೆ ಆಗಿರುವುದಿಲ್ಲ. ಇದು ನಮಸ್ಕಾರ, ಇದು ತಿರಸ್ಕಾರ, ಇದು ಪುರಸ್ಕಾರ ಹೀಗೆ ಮಾಡಿದರೆ ಇದರ ನೀತಿ ಹೀಗೆಯೆಂದು ದಾರಿಯನ್ನು ತೋರಿ ಕೊಡಬೇಕಲ್ಲ ಅದನ್ನು ಮೊಟ್ಟ ಮೊದಲ ಬಾರಿಗೆ ಮಾಡಿದ್ದು ಭಗವಂತ. ಸೃಷ್ಟಿಯನ್ನು ಯಾವ ರೀತಿ ಮಾಡಬೇಕು? ಸೃಷ್ಟಿಯನ್ನು ಮಾಡಬೇಕಾದ ವಿಧಾನವೇನು? ಏನಾದರೆ ಸೃಷ್ಟಿಯಾಗುತ್ತೆ? ಒಂದು ಕ್ರಮದಲ್ಲಿ ಸೃಷ್ಟಿಯನ್ನು ಮಾಡುತ್ತ ಬಂದಿರುವರು.
ಹೀಗಾದರೆ ಸೃಷ್ಟಿಯಾಗುತ್ತದೆ ಎಂದು ವ್ಯವಸ್ಥೆ ಮಾಡಿದವನು, ಅದು ಭಗವಂತ. ಆದುದರಿಂದ ಅವನು ಅಗ್ರಣಿ : ಏನು ಮಾಡಿದರೆ ಅದು ಸೃಷ್ಟಿ, ಏನು ಮಾಡಿದರೆ ಅದು ಸಂಹಾರ, ಏನು ಮಾಡಿದರೆ ಬದುಕು /ಜ್ಞಾನ /ಸಂಸಾರ /ಏನು ಮಾಡಿದರೆ ಸುಮೋಕ್ಷ. ಇದೆಲ್ಲವನ್ನು ಕೂಡ ಮೊಟ್ಟ ಮೊದಲ ಬಾರಿಗೆ ವ್ಯವಸ್ಥೆ ಮಾಡಿಕೊಟ್ಟವನು ಭಗವಂತ. ಆದುದರಿಂದ ಅವನು ಅಗ್ರಣಿ, ಅಗ್ರ ನಾಯಕ.
ವೇದಗಳಲ್ಲಿ ಉಪದೇಶ ಮಾಡುವ ಮೂಲಕವಾಗಿಯೂ ಭಗವಂತ ಅಗ್ರಣಿ: ಮಹಾಭಾರತ ಗ್ರಂಥ ರಚಿಸುವುದರ ಮುಖಾಂತರ ಅವನು ಅಗ್ರಣಿ. ಇಂದು ಬೇಕಾದಷ್ಟು ಶಾಸ್ತ್ರಗಳು ಬಂದಿವೆ. ಆ ಎಲ್ಲ ಶಾಸ್ತ್ರಗಳ ಮತ್ತು ಸಾಹಿತ್ಯದ ಮೂಲ ಮಹಾಭಾರತ. ಆ ಎಲ್ಲ ಶಾಸ್ತ್ರಗಳ ಸಾಹಿತ್ಯಗಳ ಮೂಲವನ್ನು ಭಗವಂತ ಹೇಳಿದ್ದರಿಂದ ಅವನು ಅಗ್ರಣಿ. ಸೃಷ್ಟಿಗೆ ಪ್ರವರ್ತಕನಾದದ್ದರಿಂದ ಅಗ್ರಣಿ: ಹೀಗಾಗಿ ಅವನನ್ನು ಅಗ್ನಿ ಎಂದು ಕರೆಯುವುದು ಎಂದು ಶ್ರೀಮದಾಚಾರ್ಯರು ಋಗ್ ಭಾಷ್ಯದಲ್ಲಿ ಪ್ರಾರಂಭದಲ್ಲಿ ತಿಳಿಸುತ್ತಾರೆ.
ಇದಲ್ಲದೆ ಈ ಶರೀರಕ್ಕೆ ಭಗವಂತ ಪ್ರೇರಕ ಆಗಿದ್ದರಿಂದ ಅವನು ಅಗ್ನಿ. ಅಂಗ ನೀ ಅಗ್ನಿ… ಶರೀರದೊಳಗೆ ಅಂತರ್ಯಾಮಿಯಾಗಿ ದೇವರು ಇದ್ದು ನಮ್ಮ ಶರೀರದಲ್ಲಿ ಪ್ರೇರಣೆ ಮಾಡುತ್ತಾನೆ ಎಂಬುದಕ್ಕೆ ಈ ಶರೀರ ಕಾರ್ಯ ಮಾಡುತ್ತದೆ. ಆದುದರಿಂದ ಅವನು ಅಗ್ನಿ. ಶ್ರೀಮದಾಚಾರ್ಯರು ಹೇಳುವ ಈ ಅರ್ಥ ಗಳು ಎಷ್ಟು ಸೊಗಸಾಗಿದೆ ಎಂದರೆ ನಾವು ಅನುಭವಕ್ಕೆ ತಂದುಕೊಳ್ಳುವದಾದರೆ, ದೇವರು ನಮ್ಮ ಶರೀರವನ್ನು ಕಾರ್ಯಶೀಲ ಮಾಡುವುದಕ್ಕೆ ನಮ್ಮ ದೇಹದಲ್ಲಿ ತೇಜಸ್ ಅನ್ನು ಇಟ್ಟು ಆ ತೇಜಸ್ಸಿನಲ್ಲಿ ತಾನು ಇರುವುದರಿಂದ ನಡೆಸುತ್ತಾನೆ. ಆದುದರಿಂದ ವೈದ್ಯರು ರೋಗಿಯ ಕೈ-ಕಾಲು ಮುಟ್ಟಿ ನೋಡಿದಾಗ ಇದ್ದರೆ ಒಳಗೆ ತೇಜಸ್ ಇಲ್ಲ ಮೈ ತಣ್ಣಗಾಗಿದೆ. ಒಳಗಿರುವ ಬಿಸಿ ಇಲ್ಲ. ಹಾಗಾದರೆ ಅಗ್ನಿ ಇಲ್ಲ.. ಜಡವಾದ ದೇಹದಲ್ಲಿ ಅಗ್ನಿ ಕೆಲಸ ಮಾಡುವದಿಲ್ಲ.
ಅದರಲ್ಲಿ ಇದ್ದು ಭಗವಂತ ಕಾರ್ಯ ಮಾಡುತ್ತಾನೆ. ಹಾಗಾದರೆ ಭಗವಂತ ಅಗ್ನಿಯಾಗಿ ಹೊರಗಿನ ಅಡುಗೆ ಮಾಡುವುದಕ್ಕೂ ಬೆಳಕು ಕೊಡುವುದಕ್ಕೆ ಮಾತ್ರವಲ್ಲ. ಒಳಗಿದ್ದು ಶರೀರ ಕಾರ್ಯದಲ್ಲಿ ಪ್ರವೃತ್ತರಾಗಿರುವುದಕ್ಕೂ ಭಗವಂತ ಕಾರಣರಾಗಿರೋದಕ್ಕೆ ಅವನಿಗೆ ಅಗ್ನಿ ಎಂಬ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಶ್ರೀಮದಾಚಾರ್ಯರ ವ್ಯಾಖ್ಯಾನ ಹಾಗೂ ನಮ್ಮ ಅನುಭವ ನೋಡಿದರೆ, ಶ್ರೀಮದಾಚಾರ್ಯರ ವ್ಯಾಖ್ಯಾನ ಎಷ್ಟು ಔಚಿತ್ಯಪೂರ್ಣ ಮತ್ತು ಅನುಭವಕ್ಕೆ ಅನುಕೂಲವಾಗುವಂತಹದ್ದು ಎಂದು ನಮಗೆ ತಿಳಿದು ಬರುತ್ತದೆ ಎಂದು ಶ್ರೀಗಳು ತಮ್ಮ ಭಕ್ತವೃಂದಕ್ಕೆ ಬೋಧಿಸಿದ್ದಾರೆ.

Previous articleಭಾರತದ ಬಡತನ ಅಳತೆಯಲ್ಲೇ ವಿವಾದ
Next articleಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ