Home ಕ್ರೀಡೆ ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಜೈಸ್ವಾಲ್

ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಜೈಸ್ವಾಲ್

0
28

ಪಂದ್ಯ ಬಳಿಕ ತೀವ್ರ ಅಸ್ವಸ್ಥತೆ; ವೈದ್ಯರಿಂದ ವಿಶ್ರಾಂತಿ ಸೂಚನೆ

ಪುಣೆ : ಟೀಂ ಇಂಡಿಯಾದ ಭರವಸೆಯ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಅಸ್ವಸ್ಥತೆಯಿಂದಾಗಿ ಅಚಾನಕ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಸದ್ಯ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಜೈಸ್ವಾಲ್, ಪಂದ್ಯ ಮುಗಿದ ನಂತರ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಪಂದ್ಯ ನಡೆಯುವ ಸಂದರ್ಭದಲ್ಲೇ ಜೈಸ್ವಾಲ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪಂದ್ಯ ಮುಗಿದ ಬಳಿಕ ನೋವು ಇನ್ನಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ತಂಡದ ವೈದ್ಯಕೀಯ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು, ಜೈಸ್ವಾಲ್ ಅವರನ್ನು ಪಿಂಪ್ರಿ ಚಿಂಚ್‌ವಾಡ್‌ನ ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಲ್ಲಿ ಪಂದ್ಯ ಖಚಿತ

ವೈದ್ಯಕೀಯ ಪರೀಕ್ಷೆ, ವಿಶ್ರಾಂತಿಗೆ ಸಲಹೆ: ಆಸ್ಪತ್ರೆಯಲ್ಲಿ ಜೈಸ್ವಾಲ್ ಅವರಿಗೆ CT ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಗಂಭೀರ ಸಮಸ್ಯೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಆದರೂ, ಪೂರ್ಣ ಚೇತರಿಕೆಗಾಗಿ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಜೈಸ್ವಾಲ್ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.

ವೈದ್ಯರು ಜೈಸ್ವಾಲ್ ಅವರಿಗೆ ಇಂಟ್ರಾವೆನಸ್ ಔಷಧ ಚಿಕಿತ್ಸೆ (IV medication) ನೀಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2026 Auction: RCBಗೆ ಸೇರಿದ ವೆಂಕಟೇಶ್ ಅಯ್ಯರ್‌

ಭಾರತ ತಂಡದಿಂದ ಸದ್ಯ ಹೊರಗಿರುವ ಜೈಸ್ವಾಲ್: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತ ತಂಡದ ಯಾವುದೇ ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ವೈದ್ಯರ ಸೂಚನೆಯಂತೆ ವಿಶ್ರಾಂತಿ ಪಡೆದು, ಶೇ.100ರಷ್ಟು ಚೇತರಿಸಿಕೊಂಡ ಬಳಿಕವೇ ಅವರು ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ.

ಜೈಸ್ವಾಲ್ ಅವರ ಆರೋಗ್ಯ ಸುಧಾರಣೆಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ವಲಯದವರು ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದಾರೆ.