ಅಹ್ಮದಾಬಾದ್: ವಡೋದರಾದಲ್ಲಿ ಫೆ. 5ರಂದು ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡುವ ತಂಡ ಯಾವುದು ಎಂಬುದು ಫೆ. 3ರ ಮಂಗಳವಾರ ನಿರ್ಧಾರವಾಗಲಿದೆ.
ಡಬ್ಲ್ಯುಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಅದರೊಂದಿಗೆ ಡೆಲ್ಲಿ ತಂಡವು ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ನಾಕೌಟ್ ಹಂತಕ್ಕೇರಿವೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯುವುದರಿಂದ ಈ ತಂಡಗಳಲ್ಲಿ ಒಂದು ಟೀಮ್ ಟೂರ್ನಿಯಿಂದ ಹೊರಬೀಳುತ್ತದೆ. ಆದ್ದರಿಂದ ಆರ್‌ಸಿಬಿ ವಿರುದ್ಧ ಆಡುವ ತಂಡ ಯಾವುದೆಂಬುದು ಫೆ. 3ರಂದು ನಿರ್ಧಾರವಾಗಲಿದೆ. ಹೀಗಾಗಿ ಈ ಬಾರಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಅಥವಾ ಗುಜರಾತ್ ಜೈಂಟ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿವೆ.
ಫೈನಲ್ ಪಂದ್ಯವು ಫೆ. 5ರಂದು ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಆರ್‌ಸಿಬಿ 2ನೇ ಬಾರಿ ಡಬ್ಲ್ಯುಪಿಎಲ್ ಟ್ರೋಫಿ ಪಡೆಯಲಿದೆಯೇ ಎಂಬುದು ಅಭಿಮಾನಿಗಳಲ್ಲಿ ಕಾತರ ಮೂಡಿಸಿದೆ.
ಗುಜರಾತ ಜೈಂಟ್ಸ್ ಸತತ ಎರಡನೇ ವರ್ಷ ಎಲಿಮಿನೇಟರ್‌ಗೆ ಅರ್ಹತೆ ದೊರಕಿಸಿಕೊಂಡಿದ್ದಾರಾದರೂ ಈ ಸಲ ತಿರುಗೇಟು ನೀಡುವ ಭರವಸೆಯನ್ನು ಡೆಲ್ಲಿ ನಾಯಕಿ ಜೆಮಿಮಾ ರಾಡ್ರಗಿಸ್ ನೀಡಿದ್ದಾರೆ.
ಜೈಂಟ್ಸ್ ನಾಯಕಿ ಆ್ಯಷ್ಲೆ ಗಾರ್ಡನರ್‌ಗೆ ಸೋಫಿಯಾ ಡಿವೈನ್, ಅನುಷ್ಕಾ ಶರ್ಮಾ, ಕಾಶ್ವಿ ಗೌತಮ್, ಭಾರತಿ ಫುಲ್ಮಲಿ, ಬೆತ್ ಮೂನಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ ಬಲ ತುಂಬಲಿದ್ದಾರೆ. ಸ್ಫೋಟಕ ಪ್ರಾರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಲಿಜೆಲ್ಲಿ ಲೀ ಅವರು ನೀಡಬಹುದಾದ ಆರಂಭದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್‌ನ ಭವಿಷ್ಯ ನಿಂತಿದೆ.
ಪಂದ್ಯದ ಆರಂಭದ ಸಮಯ: ಸಂಜೆ 7.30























