ಮಹಿಳಾ ವಿಶ್ವಕಪ್ 2025: ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ ಗೆಲುವೇ ಸೆಮಿಫೈನಲ್ ಹಾದಿ!

0
31

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ ಆತಿಥೇಯ ಭಾರತ ತಂಡಕ್ಕೆ ಇಂದು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಅತ್ಯಂತ ನಿರ್ಣಾಯಕವಾಗಲಿದೆ. ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಈಗ “ಮಾಡು ಇಲ್ಲವೇ ಮಡಿ” ಸ್ಥಿತಿಯಲ್ಲಿದೆ. ಇಂದು ನವಿಮುಂಬೈನಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವು ಸಾಧಿಸದಿದ್ದರೆ ಸೆಮಿಫೈನಲ್ ಹಾದಿ ತೀರಾ ಕಷ್ಟವಾಗಲಿದೆ.

ಭಾರತ ಈಗಾಗಲೇ ಐದು ಪಂದ್ಯಗಳನ್ನು ಆಡಿದ್ದು, ಎರಡು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ ಕೇವಲ 4 ಅಂಕಗಳನ್ನು ಗಳಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಿಂದ ಇದ್ದ ಭಾರತ, ನಂತರ ಹ್ಯಾಟ್ರಿಕ್ ಸೋಲು ಕಂಡು ತೀವ್ರ ಒತ್ತಡದಲ್ಲಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ (ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ) ಎರಡನ್ನೂ ಗೆದ್ದರಷ್ಟೇ ಭಾರತ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ.

ಇತ್ತ ನ್ಯೂಜಿಲೆಂಡ್ ತಂಡವೂ ಸಹ ಇದೇ ರೀತಿಯ ಹಾದಿಯಲ್ಲಿದೆ. ಕಿವೀಸ್‌ಗಳು ಕೂಡ 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿವೆ. ಎರಡು ಪಂದ್ಯಗಳು ಮಳೆ ಆಹುತಿಯಾದ್ದರಿಂದ ಅವರಿಗೆ ಸಹ 4 ಅಂಕಗಳಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ಭಾರತ 4ನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ 5ನೇ ಸ್ಥಾನದಲ್ಲಿದೆ.

ಸೆಮಿಫೈನಲ್ ಹಂತಕ್ಕೆ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲುಪಿವೆ. ಉಳಿದ ಒಂದೇ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತೀವ್ರ ಪೈಪೋಟಿಯಲ್ಲಿವೆ. ಭಾರತ ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೆ ನಿರ್ವಿಘ್ನವಾಗಿ ಸೆಮೀಸ್‌ಗೆ ಪ್ರವೇಶಿಸಲಿದೆ. ಆದರೆ ಒಂದು ಪಂದ್ಯದಲ್ಲಾದರೂ ಸೋತರೆ ಕಿವೀಸ್ ಹಾಗೂ ಲಂಕಾ ತಂಡಗಳ ಫಲಿತಾಂಶವು ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ.

ನ್ಯೂಜಿಲೆಂಡ್‌ಗೆ ಭಾರತ ಮಾತ್ರವಲ್ಲದೆ ಕೊನೆಯ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರಿನ ಸವಾಲೂ ಎದುರಿದೆ. ಲಂಕಾ ತಂಡಕ್ಕೆ ಪಾಕಿಸ್ತಾನ ವಿರುದ್ಧ ಇನ್ನೊಂದು ಪಂದ್ಯ ಬಾಕಿಯಿದ್ದು, ಅದರಲ್ಲಿ ಜಯ ಸಾಧಿಸಿದರೂ ಅವರ ಸೆಮೀಸ್ ಹಾದಿ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಈ ಮಧ್ಯೆ ಕಳೆದ ರಾತ್ರಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರಿಂದ ಸೆಮಿಫೈನಲ್ ಹಾದಿ ಇನ್ನಷ್ಟು ರೋಚಕತೆಯನ್ನು ಪಡೆದಿದೆ. ಇಂದು ನಡೆಯಲಿರುವ ಭಾರತ – ನ್ಯೂಜಿಲೆಂಡ್ ಪೈಪೋಟಿ ಈ ವಿಶ್ವಕಪ್‌ನ ಪ್ರಮುಖ ತಿರುವಾಗಿ ಪರಿಣಮಿಸಬಹುದು.

Previous articleBPL ಕಾರ್ಡ್‌ದಾರರೇ ಎಚ್ಚರ: ಈ 9 ವರ್ಗದ ಜನರ ಕಾರ್ಡ್ ರದ್ದಾಗುವುದು ಖಚಿತ!
Next articleಪತ್ನಿ ಕೊಲೆ: ಕೊನೆಗೂ ಬಾಯಿಬಿಟ್ಟ ಪತಿ, ಬಯಲಾಯ್ತು ಸಾವಿನ ಹಿಂದಿನ ‘ಸೈಲೆಂಟ್’ ಸಂಚು!

LEAVE A REPLY

Please enter your comment!
Please enter your name here