VIJAY HAZARE TROPHY: ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ

0
6

ವಿಜಯ್ ಹಜಾರೆ ಟ್ರೋಫಿಯ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 16,000 ರನ್ ಪೂರೈಕೆ

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದಾರೆ. ಬುಧವಾರ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಕೊಹ್ಲಿ, ಕೇವಲ ಒಂದು ರನ್ ಗಳಿಸುವ ಮೂಲಕ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳ ಮೈಲುಗಲ್ಲು ತಲುಪಿದರು.

ಸುಮಾರು 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಮರಳಿದ ವಿರಾಟ್ ಕೊಹ್ಲಿ, ಈ ಸಾಧನೆಯೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಆದ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಕೊಹ್ಲಿ 343 ಲಿಸ್ಟ್-ಎ ಪಂದ್ಯಗಳ 50 ಓವರ್ ವೃತ್ತಿಜೀವನದಲ್ಲಿ ಈ ಮಹತ್ವದ ಗುರಿ ತಲುಪಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿ ಪ್ರದಾನ : ಕ್ರೀಡಾಕ್ಷೇತ್ರಕ್ಕೆ ಸರ್ಕಾರದ ಬಲವಾದ ಬೆಂಬಲ – ಸಿಎಂ ಸಿದ್ದರಾಮಯ್ಯ

ಎಲೈಟ್ ಕ್ಲಬ್‌ಗೆ ಸೇರ್ಪಡೆ: ಈ ಸಾಧನೆಯ ಮೂಲಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ನಂತರ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 16,000 ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ, ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಒಟ್ಟಾರೆ ಒಂಬತ್ತನೇ ಬ್ಯಾಟರ್ ಎಂಬ ಗೌರವವೂ ಕೊಹ್ಲಿಗೆ ದೊರೆತಿದೆ.

20 ವರ್ಷಗಳ ದೀರ್ಘ ವೃತ್ತಿಜೀವನ: ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಕೊಹ್ಲಿಯ ವೃತ್ತಿಜೀವನವು ಈಗ 20 ವರ್ಷಗಳ ಹಂತಕ್ಕೆ ಸಮೀಪಿಸುತ್ತಿದೆ. ಫೆಬ್ರವರಿ 2006ರಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ದೆಹಲಿ ಪರ ಚೊಚ್ಚಲ ಪ್ರವೇಶ ಮಾಡಿದ್ದ ಕೊಹ್ಲಿ, ಆಗಿನಿಂದಲೇ 50 ಓವರ್ ಕ್ರಿಕೆಟ್‌ನಲ್ಲಿ ನಿರಂತರ ಸಾಧನೆ ಮಾಡುತ್ತಾ ಬಂದಿದ್ದಾರೆ.

ದೆಹಲಿಯ ಪರ ಕೊಹ್ಲಿ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 16 ಪಂದ್ಯಗಳಲ್ಲಿ ಆಡಿದ್ದು, 4 ಶತಕಗಳು. ಹಲವು ಅರ್ಧಶತಕಗಳು. 60.66 ಸರಾಸರಿ ಮೂಲಕ 910 ರನ್‌ಗಳು ಎಂಬ ಶ್ರೇಷ್ಠ ದಾಖಲೆ ಹೊಂದಿದ್ದಾರೆ.

ಕೊಹ್ಲಿ ಕೊನೆಯ ಬಾರಿಗೆ 2010–11 ಋತುವಿನಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ನಂತರ ಅವರು 2013–14ರ NKP ಸಾಲ್ವೆ ಚಾಲೆಂಜರ್ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದರು. ಆ ಟೂರ್ನಿಯ ಫೈನಲ್‌ನಲ್ಲಿ ದೆಹಲಿ ತಂಡ ಇಂಡಿಯಾ ಬ್ಲೂ ವಿರುದ್ಧ ಸೋಲು ಅನುಭವಿಸಿತ್ತು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ

ಇತ್ತೀಚಿನ ಫಾರ್ಮ್ ಕೂಡ ಅದ್ಭುತ: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮತ್ತೊಮ್ಮೆ ಪ್ರದರ್ಶಿಸಿದ್ದರು. ಸತತ ಎರಡು ಶತಕಗಳನ್ನು ಗಳಿಸುವ ಮೂಲಕ ಅವರ ಏಕದಿನ ಶತಕಗಳ ಸಂಖ್ಯೆ 53ಕ್ಕೆ ಏರಿಕೆಯಾಯಿತು.

ಒಟ್ಟಾರೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಕೊಹ್ಲಿ ಈಗಾಗಲೇ 21,999 ರನ್‌ಗಳು ಮತ್ತು 57 ಶತಕಗಳನ್ನು ಗಳಿಸಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದು (60 ಶತಕಗಳು), ಕೊಹ್ಲಿಗೆ ಆ ದಾಖಲೆಯನ್ನು ಮುರಿಯಲು ಈಗ ಮಾತ್ರ ಮೂರು ಶತಕಗಳ ಕೊರತೆ ಇದೆ.

ದಾಖಲೆಗಳ ವಿರಾಜ: ವಿರಾಟ್ ಕೊಹ್ಲಿಯ ಈ ಸಾಧನೆ ಭಾರತೀಯ ಕ್ರಿಕೆಟ್‌ಗೆ ಮತ್ತೊಂದು ಹೆಮ್ಮೆಯ ಕ್ಷಣವಾಗಿದ್ದು, ಅವರ ಸ್ಥಿರತೆ, ಸಮರ್ಪಣೆ ಮತ್ತು ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಡೆಲ್ಲಿ ಪರ ಆಡುತ್ತಿರುವ ವಿರಾಟ್, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಮರಳಿಕೆ ಯುವ ಆಟಗಾರರಿಗೆ ದೊಡ್ಡ ಪ್ರೇರಣೆಯಾಗಿದೆ.

Previous articleಅಂದುಕೊಂಡಿದ್ದನ್ನು ಶಾಮನೂರು ಶಿವಶಂಕರಪ್ಪ ಮಾಡಿ ಹೋಗಿದ್ದಾರೆ