Home Advertisement
Home ಕ್ರೀಡೆ T20 WorldCup: ಆಂಗ್ಲರ ಎದುರು ಹೋರಾಟಕ್ಕೆ ಸೂರ್ಯಪಡೆ ಸಜ್ಜು

T20 WorldCup: ಆಂಗ್ಲರ ಎದುರು ಹೋರಾಟಕ್ಕೆ ಸೂರ್ಯಪಡೆ ಸಜ್ಜು

0
18

ಮುಂಬೈ: ಕ್ರಿಕೆಟ್ ಪ್ರೇಮಿಗಳ ಎದೆಬಡಿತ ಹೆಚ್ಚಿಸುವ ಸಮಯ ಬಂದಿದೆ. 2026ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ ಮತ್ತು ಪ್ರಬಲ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಸಂಜೆ ಆರಂಭವಾಗಲಿರುವ ಈ ಪಂದ್ಯವು `ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಭಾರತ ತಂಡಕ್ಕೆ ಅತ್ತ 2010ರ ನಂತರ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ಈಗ ಫೈನಲ್‌ಗೇರಲು ತನ್ನೆಲ್ಲಾ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ.

ಹಾಲಿ ಚಾಂಪಿಯನ್ ಆಗಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾದ ಪಯಣ ಫೈನಲ್‌ವರೆಗೂ ತಲುಪುತ್ತಾ ಅಥವಾ ಇಂದೇ ಅಂತ್ಯವಾಗುತ್ತಾ ಎಂಬ ಕುತೂಹಲ ಭಾರತೀಯ ಅಭಿಮಾನಿಗಳಲ್ಲಿದೆ. ಈ ಬಾರಿಯೂ ಅಮೋಘ ಫಾರ್ಮ್‌ಲ್ಲಿರುವ ಟೀಮ್ ಇಂಡಿಯಾ, ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ (97 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ತವರಿನ ಪ್ರೇಕ್ಷಕರ ಬೆಂಬಲ ಭಾರತಕ್ಕೆ ದೊಡ್ಡ ಶಕ್ತಿಯಾಗಲಿದೆ. ಅಷ್ಟೇ ಅಲ್ಲದೇ, ವಾಂಖೆಡೆ ಸ್ಟೇಡಿಯಂ ಭಾರತಕ್ಕೆ ನೆಚ್ಚಿನ ಸ್ಟೇಡಿಯಂ ಆಗಿದ್ದು, ಕಿಕ್ಕಿರಿದ ಅಭಿಮಾನಿಗಳ ಬೆಂಬಲವೂ ಸೂರ್ಯಪಡೆಗೆ ಸಿಗಲಿದೆ.

ಇದನ್ನೂ ಓದಿ: ಚಿಕಾಗೋ ವಿವಿ ಇಂದ ಪ್ರೊ. ಸುಬ್ರಮಣಿಯನ್‌ಗೆ ಪ್ರತಿಷ್ಠಿತ ಗೌರವ

ಮತ್ತೊಂದೆಡೆ, ಹ್ಯಾರಿ ಬ್ರೂಕ್ ಪಡೆ ಈ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಹ್ಯಾರಿ ಬ್ರೂಕ್ ಮತ್ತು ಫಿಲ್ ಸಾಲ್ಟ್ ಅವರ ಭರ್ಜರಿ ಬ್ಯಾಟಿಂಗ್ ಫಾರ್ಮ್ ಭಾರತೀಯ ಬೌಲರ್‌ಗಳಿಗೆ ಸವಾಲಾಗಬಹುದು. ಕಳೆದ ಎರಡು ವಿಶ್ವಕಪ್‌ಗಳ ಸೆಮಿಫೈನಲ್‌ನಲ್ಲಿಯೂ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, ತಲಾ ಒಂದು ಜಯ ಸಾಧಿಸಿವೆ. ಹೀಗಾಗಿ ಇಂದು ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಮೂರನೇ ಸಲ ಯಾರು?: ಭಾರತ ಹಾಗೂ ಇಂಗ್ಲೆಂಡ್‌ಗಳು ಟಿ20 ವಿಶ್ವಕಪ್‌ನಲ್ಲಿ ಪರಸ್ಪರರನ್ನು ಎದುರಿಸುತ್ತಿರುವುದು ಇದೇ ಮೊದಲ ಸಲವೇನಲ್ಲ, ಬದಲಿಗೆ ಸತತ ಮೂರನೇ ಸಲ. ಕಳೆದೆರಡು ವಿಶ್ವಕಪ್‌ಗಳಿಂದ ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ವಿಜಯಿಗಳೇ ಅಂತಿಮವಾಗಿ ಪ್ರಶಸ್ತಿ ಗೆದ್ದಿದ್ದಾರೆ. ಈ ಸ್ಕೋರು 1-1ರ ಸಮಸ್ಥಿತಿಯಲಿದ್ದು ಮೂರನೇ ಸಲ ಯಾರಿಗೆ ವಿಜಯಮಾಲೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಗುರುವಾರ ಉತ್ತರ ಸಿಗಲಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ 2026: ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟ

ಮಳೆ ಬಂದರೆ ಭಾರತಕ್ಕೆ ಸಂಕಷ್ಟ!: ಈ ಪಂದ್ಯಕ್ಕೆ ಮೀಸಲು ದಿನ ಇದ್ದರೂ, ಒಂದು ವೇಳೆ ಮಳೆಯಿಂದಾಗಿ ಪಂದ್ಯ ಸಂಪೂರ್ಣ ರದ್ದಾದರೆ ಭಾರತಕ್ಕೆ ಹಿನ್ನಡೆಯಾಗಲಿದೆ. ನಿಯಮದ ಪ್ರಕಾರ, ಪಂದ್ಯ ರದ್ದಾದರೆ ಸೂಪರ್ 8 ಹಂತದಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಫೈನಲ್‌ಗೆ ಹೋಗುತ್ತದೆ. ಇಂಗ್ಲೆಂಡ್ ತನ್ನ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಪಂದ್ಯ ನಡೆಯುವುದು ಭಾರತಕ್ಕೆ ಅತ್ಯಗತ್ಯ.

ಮುಖಾಮುಖಿ: ಭಾರತ ಟಿ20 ವಿಶ್ವಕಪ್‌ಗಳಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟು 5 ಬಾರಿ ಸೆಣಸಾಡಿದೆ. ಇದರಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದು, 3 ಬಾರಿ ಗೆಲುವು ಸಾಧಿಸಿದೆ. ಆದ್ರೆ, ಇಂಗ್ಲೆಂಡ್ 2 ಬಾರಿ ಜಯ ಕಂಡಿದೆ.

29 ಟಿ20 ಪಂದ್ಯಗಳಲ್ಲಿ ಭಾರತ 17 ಪಂದ್ಯಗಳನ್ನು ಗೆದ್ದು ಬೀಗಿದ್ದು, ಇಂಗ್ಲೆಂಡ್ ತಂಡ ಉಳಿದ 12 ಬಾರಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲದೇ, ಸ್ವದೇಶದಲ್ಲಿ ಭಾರತ ತಂಡ ಆಡಿದ ಕಳೆದ 7 ಪಂದ್ಯಗಳಲ್ಲಿ 6 ಬಾರಿ ಗೆದ್ದಿದೆ.

ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ
ಸಮಯ: ಸಂಜೆ 7:00 ಗಂಟೆಗೆ