ಮುಂಬೈ: ಸಂಜು ಸ್ಯಾಮ್ಸನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 7 ರನ್‌ಗಳ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್‌ನ ಫೈನಲ್ ಪ್ರವೇಶಿಸಿದೆ.
ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಉತ್ತಮ ಆರಂಭವನ್ನು ಮಾಡಿತು.
ಅಭಿಷೇಕ ಶರ್ಮಾ (9) ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಸಂಜು ಜತೆಗೂಡಿದ ಇಶಾನ್ ಕಿಶನ್ (39) 97 ರನ್‌ಗಳ ಜತೆಯಾಟ ನಡೆಸಿದರು.
ಈ ಜೋಡಿ ಬೇರ್ಪಡುವ ಹೊತ್ತಿಗೆ ಭಾರತದ ಮೊತ್ತ 9.3 ಓವರ್‌ಗಳಲ್ಲಿ 117 ರನ್ ಆಗಿತ್ತು. ಬಳಿಕ ಶಿವಂ ದುಬೆ ಜತೆಗೆ ಅಬ್ಬರದ ಬ್ಯಾಟಿಗ್ ಮುಂದುವರಿಸಿದ ಸ್ಯಾಮ್ಸನ್ 42 ಎಸೆತದಲ್ಲಿ 89 ರನ್ ಗಳಸಿ ಹೊರ ನಡೆದರು.
ತಿಲಕ ವರ್ಮಾ 7 ಎಸೆತದಲ್ಲಿ 21 ರನ್, ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ 27 ರನ್ ಗಳಿಸಿ ತಂಡದ ಮೊತ್ತವನ್ನು 250 ಗಡಿ ದಾಡುವಂತೆ ಮಾಡಿದರು.
ಜಾಕೋಬ್ ಬೆಥೆಲ್ ಏಕಾಂಗಿ ಹೋರಾಟ: ಇಂಗ್ಲೆಂಡ್ 4.1 ಓವರ್‌ಗಳಲ್ಲಿ 38ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ್ರಿಸ್‌ಗೆ ಬಂದ ಜಾಕೋಬ್ ಬೆಥೆಲ್ ಏಕಾಂಗಿ ಹೋರಾಟ ನಡೆಸಿದರು. ಕೇವಲ 48 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳಿಂದ 105 ರನ್‌ಗಳಿಸಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ರನೌಟ್‌ಗೆ ಬಲಿಯಾದರು.
ಬೆಥೆಲ್ ಮತ್ತು ವಿಲ್ ಜ್ಯಾಕ್ಸ್ 77 ರನ್‌ಗಳ ಜತೆಯಾಟ ಇಂಗ್ಲೆಂಡ್ ತಂಡದ ಅತ್ಯುತ್ತಮ ಜತೆಯಾಟವಾಯಿತು. ಈ ಜೋಡಿ ತಂಡವನ್ನು ಅತ್ಯುತ್ತಮ ಸ್ಥಿತಿಗೆ ಕೊಂಡೊಯ್ಯುವ ಮೂಲಕ ಗೆಲುವಿನ ಆಸೆಯನ್ನು ಹೆಚ್ಚಿಸಿತು.
4ನೇ ಬಾರಿ ಫೈನಲ್ ಪ್ರವೇಶ: ಟಿ20 ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ದಾಖಲೆಯನ್ನು ಮಾಡಿದೆ. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ 4ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದ ತಂಡ ಭಾರತದ ಹೆಸರಿಗೆ ದಾಖಲಾಯಿತು. ಉಳಿದಂತೆ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಮೂರು ಬಾರಿ ಫೈನಲ್ ಪ್ರವೇಶಿಸಿವೆ.























