ಚಂಡೀಗಢ: ತಿಲಕ್ ವರ್ಮಾ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 51 ರನ್‌ಗಳ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ 19.1 ಓವರ್‌ಗಳಲ್ಲಿಯೇ 162 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಮೊದಲ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿʼಕಾಕ್ ಉತ್ತಮ ಆರಂಭವನ್ನು ನೀಡಿದರು. ಮತ್ತೋರ್ವ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ (8) ಬಹುಬೇಗ ಪೆವಿಲಿಯನ್ ಸೇರಿದರಾದರೂ 2 ವಿಕೆಟ್‌ಗೆ ಮಾಕ್ರಮ್ ಮತ್ತು ಡಿʼಕಾಕ್ ಜೋಡಿ 83 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತ ಪೇರಿಸುವಲ್ಲಿ ಕಾರಣರಾದರು.
ಕ್ವಿಂಟನ್ ಡಿʼಕಾಕ್ ಕೇವಲ 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್‌ನೊಂದಿಗೆ 90 ರನ್‌ಗಳಿಗೆ ರನೌಟ್ ಆಗಿ ಹೊರನಡೆದರು. ಬಳಿಕ ಡೊನೊವನ್ ಫೆರೀರಾ ಕೇವಲ 13 ಎಸೆತಗಳಲ್ಲಿ 1 ಬೌಂಡರಿ, ಮೂರು ಸಿಕ್ಸರ್‌ಗಳು ಸೇರಿ 30 ರನ್ ಸಿಡಿಸಿ ಅಬ್ಬರಿಸಿದರು.
214 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ಶುಭಮನ್ ಗಿಲ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದರು. ಅಭಿಷೇಕ ಶರ್ಮಾ 8 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 17 ರನ್ ಗಳಿಸಿ ಅಬ್ಬರಿಸುತ್ತಿರುವಾಗಲೇ ಮಾರ್ಕೊ ಜಾನ್ಸೆನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು.
ಒಂದಡೆ ಒಬ್ಬರ ಹಿಂದೆ ಒಬ್ಬರಂತೆ ಬ್ಯಾಟ್ಸಮನ್‌ಗಳು ಪೆವಿಲಿಯನ್ ಸೇರುತ್ತಿರುವ ನಡುವೆ ತಿಲಕ್ ವರ್ಮಾ (62) ಏಕಾಂಗಿಯಾಗಿ ಹೋರಾಟ ನಡೆಸಿ ಕೊನೆಯವರಾಗಿ ಹೊರನಡೆದರು.









