ಬಾರ್ಬಿ ಡ್ರೀಮ್ ತಂಡದಲ್ಲಿ ಸ್ಮೃತಿ ಮಂಧಾನ: ಮೊದಲ ಭಾರತೀಯ ಕ್ರಿಕೆಟಿಗೆಯಾಗಿ ಐತಿಹಾಸಿಕ ಗೌರವ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ಲಭಿಸಿದೆ. ಪ್ರಸಿದ್ಧ ಆಟಿಕೆ ತಯಾರಿಕಾ ಕಂಪನಿ Mattel ತನ್ನ ಬಾರ್ಬಿ ಡ್ರೀಮ್ ತಂಡಕ್ಕೆ ಮಂಧಾನ ಅವರನ್ನು ಸೇರಿಸುವ ಮೂಲಕ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗೆಯಾಗಿ ವಿಶೇಷ ಗೌರವ ನೀಡಿದೆ.
ಈ ಉಪಕ್ರಮದ ಭಾಗವಾಗಿ ಮಂಧಾನ ಅವರ ಮಾದರಿಯಲ್ಲಿ ವಿಶೇಷ ಬಾರ್ಬಿ ಗೊಂಬೆಯನ್ನು ತಯಾರಿಸಲಾಗಿದ್ದು, ಇದು ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಧಿಸಿದ ಸಾಧನೆಗಳಿಗೆ ಗೌರವ ಸೂಚಕವಾಗಿದೆ.
ಈ ಘೋಷಣೆ International Women’s Day 2026 ರ ಆಚರಣೆಗೆ ಕೆಲ ದಿನಗಳ ಮುನ್ನ ಹೊರಬಂದಿದ್ದು, ಮಹಿಳೆಯರ ಸಾಧನೆಗಳನ್ನು ಗುರುತಿಸುವ ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ.
ವಾಣಿಜ್ಯಿಕ ಮಾರಾಟಕ್ಕೆ ಅಲ್ಲ : ಮ್ಯಾಟೆಲ್ ಕಂಪನಿಯು ಸ್ಪಷ್ಟಪಡಿಸಿರುವಂತೆ, ಮಂಧಾನ ಅವರ ಮಾದರಿಯಲ್ಲಿ ತಯಾರಿಸಿದ ಈ ವಿಶೇಷ ಬಾರ್ಬಿ ಗೊಂಬೆಯನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದಿಲ್ಲ. ಇದು ಕೇವಲ ಅವರ ಸಾಧನೆಗಳನ್ನು ಗೌರವಿಸುವ ಉದ್ದೇಶದಿಂದ ಸ್ಮರಣಾರ್ಥವಾಗಿ ನಿರ್ಮಿಸಲಾದ ವಿಶಿಷ್ಟ ಪ್ರತಿರೂಪವಾಗಿದೆ.
ಈ ಮೂಲಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಸಾಧಿಸಿರುವ ಯಶಸ್ಸನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಗೌರವಿಸುವುದು ಬಾರ್ಬಿ ಡ್ರೀಮ್ ತಂಡದ ಪ್ರಮುಖ ಉದ್ದೇಶವಾಗಿದೆ.
ಮಂಧಾನ ಪ್ರತಿಕ್ರಿಯೆ: ಈ ಗೌರವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸ್ಮೃತಿ ಮಂಧಾನ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. “ನನ್ನ ಪ್ರಯಾಣದಿಂದ ಸ್ಫೂರ್ತಿ ಪಡೆದ ಬಾರ್ಬಿ ಗೊಂಬೆಯನ್ನು ನೋಡುವುದು ಸಂತಸ ತಂದಿದೆ, ನಾನು ಇದನ್ನು ಊಹಿಸಿರಲಿಲ್ಲ. ಕ್ರಿಕೆಟ್ ನನಗೆ ತುಂಬಾ ನೀಡಿದೆ. ನನ್ನ ಕಥೆಯು ಒಂದು ಹುಡುಗಿಗೆ ತಾನು ಮೈದಾನಕ್ಕೆ ಸೇರಿದವಳು ಎಂದು ನಂಬಲು ಸಹಾಯ ಮಾಡಿದರೆ ಅದು ನನಗೆ ಅತ್ಯಂತ ಸಂತೋಷದ ವಿಷಯ,” ಎಂದು ಅವರು ಬರೆದಿದ್ದಾರೆ.
ಜಾಗತಿಕ ಸಾಧಕರಿಗೆ ಗೌರವ: ಮಂಧಾನ ಮಾತ್ರವಲ್ಲದೆ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಮಹಿಳೆಯರನ್ನು ಈ ಬಾರಿ ಬಾರ್ಬಿ ಡ್ರೀಮ್ ತಂಡದಲ್ಲಿ ಗೌರವಿಸಲಾಗಿದೆ.
ಅವರಲ್ಲಿ ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ (Serena Williams), ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ಕೆಲ್ಲಿ ಗೆರಾರ್ಡಿ (Kellie Gerardi), ಮೆಕ್ಸಿಕೋದ ರೇಸ್ ಕಾರ್ ಚಾಲಕಿ (ರೆಜಿನಾ ಸಿರ್ವೆಂಟ್) Regina Sirvent, ಇಂಗ್ಲೆಂಡ್ ಫುಟ್ಬಾಲ್ ತಾರೆ ಕ್ಲೋಯ್ ಕೆಲ್ಲಿ (Chloe Kelly), ಜರ್ಮನಿಯ ಪ್ರಸಿದ್ಧ ಗಾಯಕಿ ಹೆಲೀನ್ ಫಿಷರ್ (Helene Fischer), ಪೋಲಿಷ್ ಪರ್ವತಾರೋಹಿ (ಜೋಜಾ ಸ್ಕುಬಿಸ್) Joanna Skubis ಹಾಗೂ ಆಸ್ಟ್ರೇಲಿಯಾದ ವಿಶ್ವಪ್ರಸಿದ್ಧ ಸರ್ಫರ್ ಸ್ಟೆಫನಿ ಗಿಲ್ಮೋರ್ (Stephanie Gilmore) ಕೂಡ ಸೇರಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೆಮ್ಮೆ: ಮಂಧಾನ ಅವರು ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಟೆಸ್ಟ್, ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೀಗ ಬಾರ್ಬಿ ಡ್ರೀಮ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅವರು ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಭಾರತೀಯ ಮಹಿಳಾ ಕ್ರಿಕೆಟ್‌ಗೆ ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಗೌರವ ತಂದಿದ್ದಾರೆ.























