ಮುಂಬೈ: ಭಾರತ ತಂಡದ ಆಯ್ಕೆ ಸಮಿತಿ ಶನಿವಾರ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಶುಭಮನ್ ಗಿಲ್‌ಗೆ ನೀಡಿದ್ದ ಬಿಸಿಸಿಐ, ಈಗ ಹಿಟ್ ಮ್ಯಾನ್ ಒನ್‌ಡೇ ಕ್ರಿಕೆಟ್‌ನಲ್ಲಿ ಉಳಿದುಕೊಂಡಿದ್ದರೂ ನಾಯಕತ್ವ ಕಸಿದು ಗಿಲ್‌ಗೆ ನೀಡಿದೆ. ಈ ಮೂಲಕ ರೋಹಿತ್ ಶರ್ಮಾರ ಕ್ರಿಕೆಟ್ ಕೆರಿಯರ್ ಅಂತ್ಯದ ಸೂಚನೆ ನೀಡಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ತಂಡ ಪ್ರಕಟಿಸಿರುವ ಅಜಿತ್ ಅಗರ್ಕರ್ ಮುಂದಾಳತ್ವದ ಆಯ್ಕೆ ಸಮಿತಿ ಇಂತಹದೊಂದು ನಿರ್ಧಾರ ಪ್ರಕಟಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದೆ.
2023ರ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನ ಬಳಿಕ ಟಿ20 ವಿಶ್ವಕಪ್‌ನಲ್ಲಿನ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿನ ಗೆಲುವು ರೋಹಿತ್ ನಾಯಕತ್ವಕ್ಕೆ ಗರಿ ಮೂಡಿಸಿದ್ದವು. ಆದರೆ, ಅದಾದ ಬಳಿಕ ರೋಹಿತ್ ಹಾಗೂ ವಿರಾಟ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ರೋಹಿತ್ 2011ರಲ್ಲಿ ಧೋನಿ ಸಾಧಿಸಿದ್ದ ಸಾಧನೆಯನ್ನು ಸರಿಗಟ್ಟಿದ್ದರು. 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಬಾಕಿ ಇರುವಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್‌ಗೆ 50 ಓವರ್‌ಗಳ ನಾಯಕತ್ವವನ್ನು ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.
ಯುವ ಕ್ರಿಕೆಟರ್ ಶುಭಮನ್ ಗಿಲ್ ಅವರು ನಿರೀಕ್ಷೆಯಂತೆ ಅಧಿಕಾರ ವಹಿಸಿಕೊಂಡಿದ್ದಾರೆ. 2024 ರಲ್ಲಿ ವೈಟ್-ಬಾಲ್ ಉಪ-ನಾಯಕ ಎಂದು ಹೆಸರಿಸಲ್ಪಟ್ಟ ಅವರು ಮುಂದಿನ ನಾಯಕರಾಗುವ ಸಾಲಿನಲ್ಲಿದ್ದರು. ನಂತರ, ಮೇ ತಿಂಗಳಲ್ಲಿ, ರೋಹಿತ್ ಅವರ ಟೆಸ್ಟ್ ನಿವೃತ್ತಿಯ ನಂತರ, ಗಿಲ್ ಅವರನ್ನು ದೀರ್ಘ ಸ್ವರೂಪದ ನಾಯಕತ್ವಕ್ಕೂ ನೇಮಿಸಲಾಯಿತು. ತನ್ನ ಚೊಚ್ಚಲ ವಿದೇಶಿ ಪ್ರವಾಸದಲ್ಲೇ ಇಂಗ್ಲೆಂಡ್ ತಂಡದ ಎದುರು ಟೆಸ್ಟ್ ಸರಣಿಯನ್ನು ಡ್ರಾ ಮಾಡಿದ ಸಾಧನೆ ಗಿಲ್ ಮೇಲೆ ಈಗ ಭರವಸೆ ಇಡಲಾಗಿದೆ.
ಜಡೇಜಾಗೂ ಗೇಟ್‌ಪಾಸ್ ಸೂಚನೆ: ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳನ್ನು (11) ಗೆದ್ದ ರಾಹುಲ್ ದ್ರಾವಿಡ್ ರೀತಿ ರವೀಂದ್ರ ಜಡೇಜಾ ಗುರುತಿಸಿಕೊಂಡಿದ್ದರೂ, ಈಗ ಮುಂದಿನ ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಜಡ್ಡು ಅವರನ್ನು ಕೈ ಬಿಡಲಾಗಿದೆ. ಈ ಮೂಲಕ ಹಿರಿಯರನ್ನು ಒನ್‌ಡೇ ಕ್ರಿಕೆಟ್‌ನಿಂದಲೂ ದೂರ ಮಾಡುವ ಸೂಚನೆ ನೀಡಿದೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಪ್ರಸ್ತುತ ಜಡೇಜಾ ಶತಕ ಬಾರಿಸಿ ಮಿಂಚಿದ್ದಲ್ಲದೇ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ್ದರು. ಆದರೆ, ಜಡೇಜಾಗೆ ಆಸೀಸ್ ವಿರುದ್ಧ ಸರಣಿಗೆ ಕೊಕ್ ನೀಡಲಾಗಿದೆ.
ಸಂಜು ಸ್ಯಾಮ್ಸನ್‌ಗೂ ಗೇಟ್‌ಪಾಸ್: ಸದ್ಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನೂ ದೂರವಿಡಲಾಗಿದೆ. ಸಂಜು ಬದಲಿಗೆ ಧ್ರುವ ಜುರೇಲ್‌ಗೆ ಸ್ಥಾನ ಕಲ್ಪಿಸಲಾಗಿದೆ. ಇದರಿಂದ ಆಟಗಾರರಿಗೆ ಕೊಕ್ ನೀಡುವಲ್ಲಿ ಮುಲಾಜು ನೋಡಿಲ್ಲ.
ವಿಶ್ವಕಪ್‌ಗೂ ಡೌಟು: ಬಿಸಿಸಿಐ ಆಯ್ಕೆ ಸಮಿತಿ ಸದ್ಯ ತಂಡಗಳ ಪ್ರಕಟಣೆ ವೇಳೆ ಅಜಿತ್ ಅಗರ್ಕರ್ ರೋಹಿತ್, ವಿರಾಟ್ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದಾರೆ. `ಈ ಇಬ್ಬರೂ ಏಕದಿನ ವಿಶ್ವಕಪ್ ಆಡುವ ಬಗ್ಗೆ ಖಚಿತತೆ ಇಲ್ಲ. ತಂಡದಲ್ಲಿ ಹಿರಿಯ ಆಟಗಾರರ ಸ್ಥಾನವನ್ನು ತುಂಬಬೇಕಾಗಿದ್ದು, ತಂಡದ ಗೆಲುವಿಗೆ ರನ್‌ಗಳನ್ನು ಗಳಿಸಿದರೆ ಮಾತ್ರ ವಿಶ್ವಕಪ್ ಆಡಬಹುದು. ಈ ವಿಚಾರವನ್ನು ಈ ಇಬ್ಬರಿಗೂ ಈಗಾಗಲೇ ತಿಳಿಸಲಾಗಿದೆ ಎಂದು ಅಜಿತ್ ತಿಳಿಸಿದ್ದಾರೆ. ಹಾಗಾಗಿ, ಈಗ ಈ ಇಬ್ಬರು ವಿಶ್ವಕಪ್‌ವರೆಗೂ ಆಡಬೇಕಾದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಹತ್ವದ್ದಾಗಿರಲಿದೆ.
ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ: ಶುಭಮನ್ ಗಿಲ್ (ನಾ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್.
ಆಸ್ಟ್ರೇಲಿಯಾ ಟಿ20 ಸರಣಿಗೆ ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್