ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಗೆ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್ ಜಾಕೋಬ್ ಡಫಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ₹2 ಕೋಟಿ ಮೂಲಬೆಲೆಗೆ ಖರೀದಿಸಿದೆ.
31 ವರ್ಷದ ಬಲಗೈ ವೇಗದ ಬೌಲರ್ ಆಗಿರುವ ಜಾಕೋಬ್ ಡಫಿ, ಸದ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಂಬರ್–2 ಬೌಲರ್ ಸ್ಥಾನದಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಅವರು ನಂಬರ್–1 ಸ್ಥಾನದಲ್ಲೂ ಇದ್ದು, ನಿರಂತರ ಉತ್ತಮ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2026 Auction: RCBಗೆ ಸೇರಿದ ವೆಂಕಟೇಶ್ ಅಯ್ಯರ್
ಐಪಿಎಲ್ ಮಿನಿ ಹರಾಜಿನಲ್ಲಿ ₹2 ಕೋಟಿ ಮೂಲಬೆಲೆ ಹೊಂದಿದ್ದ ಡಫಿ ಅವರನ್ನು ಖರೀದಿಸಲು ಆರ್‌ಸಿಬಿ ಹೊರತುಪಡಿಸಿ ಯಾವುದೇ ತಂಡ ಮುಂದಾಗಲಿಲ್ಲ. ಪರಿಣಾಮ ಮೂಲಬೆಲೆಯಲ್ಲೇ ಆರ್‌ಸಿಬಿ ಡಫಿ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರ್‌ಸಿಬಿ ಈ ಖರೀದಿ ಮಾಡಿದೆ ಎನ್ನಲಾಗಿದೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 38 ಪಂದ್ಯಗಳನ್ನು ಆಡಿರುವ ಜಾಕೋಬ್ ಡಫಿ, 36 ಇನಿಂಗ್ಸ್‌ಗಳಲ್ಲಿ 53 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 7.37 ಎಕಾನಮಿ ದರ ಹೊಂದಿರುವ ಅವರು, ಹೊಸ ಬಾಲ್‌ನೊಂದಿಗೆ ಪವರ್‌ಪ್ಲೇನಲ್ಲಿ ಕಠಿಣ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡುವುದರಲ್ಲಿ ಪರಿಣತಿ ಪಡೆದಿದ್ದಾರೆ. ಜೊತೆಗೆ ಡೆತ್ ಓವರ್‌ಗಳಲ್ಲೂ ರನ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿರುವ ಬೌಲರ್ ಎಂಬ ಹೆಸರು ಪಡೆದಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಬೆಂಗಳೂರಿನಲ್ಲಿ ಪಂದ್ಯ ಖಚಿತ
ಇದು ಜಾಕೋಬ್ ಡಫಿ ಪಾಲಿಗೆ ಮೊದಲ ಐಪಿಎಲ್ ಅವಕಾಶವಾಗಿದ್ದು, ವಿಶ್ವದ ಅತಿದೊಡ್ಡ ಟಿ20 ಲೀಗ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. ವೇಗ ಮತ್ತು ನಿಯಂತ್ರಣದೊಂದಿಗೆ ಬೌಲಿಂಗ್ ಮಾಡುವ ಡಫಿ, ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಮಹತ್ವದ ಆಸ್ತಿಯಾಗುವ ನಿರೀಕ್ಷೆ ಇದೆ.























