ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ವೈರತ್ವದಿಂದ ಕೂಡಿರುವ ಪಂದ್ಯ ಎಂದು ಕರೆಯುವುದನ್ನ ನಿಲ್ಲಿಸಿ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮನವಿ ಮಾಡಿದ್ದಾರೆ. ಪಾಕ್ ತಂಡ ನಮಗೆ ಪೈಪೋಟಿಯೇ ನೀಡಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಮೊನ್ನೆ ಭಾನುವಾರ ಏಷ್ಯಾಕಪ್‌ನ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮತ್ತೆ ಪ್ರಭುತ್ವ ಮೆರೆಯಿತು. ಆಟಗಾರರ ನಡುವಿನ ಮಾತಿನ ಚಕಮಕಿ ಮತ್ತು ಹ್ಯಾಂಡ್ ಶೇಖ್ ಮಾಡದಿರುವುದು ಮತ್ತೆ ಸದ್ದು ಮಾಡಿತ್ತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಸೂರ್ಯ ಕುಮಾರ್ ಯಾದವ್, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೈರತ್ವದಿಂದ ಕೂಡಿರುವ ಪಂದ್ಯ ಎಂದು ಕರೆಯುವುದನ್ನ ನಿಲ್ಲಿಸಿ ಎಂದು ಮನವಿ ಮಾಡಿದರು. ಎರಡು ತಂಡಗಳ ಆಟವನ್ನು ಗುಣಮಟ್ಟದ ಆಟವನ್ನು ಗಮನಿಸಬೇಕೆ ಹೊರತು ವೈರತ್ವದಿಂದ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ 15 ಪಂದ್ಯಗಳನ್ನಾಡಿವೆ. ಇದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ. ಸಮಬಲದ ಪೈಪೋಟಿಯೇ ಬಂದಿಲ್ಲದಿರುವುದರಿಂದ ವೈರತ್ವ ಪದ ಬಳಸಲು ಸಾಧ್ಯವಿಲ್ಲ ಎಂದು ನಾಯಕ ಸೂರ್ಯಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಆಟಗಾರರಿಗೆ ಕೋಚ್ ಗಂಭೀರ್ ಪಾಠ: ಪಾಕ್ ಆಟಗಾರರಿಗೆ ಶೇಖ್ ಹ್ಯಾಂಡ್ ಮಾಡದೇ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಟೀಮ್ ಇಂಡಿಯಾ ಆಟಗಾರರನ್ನು ಕೋಚ್ ಗೌತಮ್ ಗಂಭೀರ್ ವಾಪಾಸ್ ಕರೆದ ಘಟನೆ ನಡೆದಿದೆ. ಪಾಕ್ ಆಟಗಾರರನ್ನು ನಿರ್ಲಕ್ಷಿಸಿ ತೆರಳಿದ್ದ ಭಾರತೀಯ ಆಟಗಾರರು ಅಂಪೈರ್‌ಗಳಿಗೆ ಹಸ್ತಲಾಘವ ನೀಡುವುದನ್ನು ಮರೆತಿದ್ದರು.
ಈ ಶಿಷ್ಟಾಚಾರವನ್ನು ಪಾಲಿಸುವಂತೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರರಿಗೆ ಸೂಚಿಸಿದ್ದಾರೆ. ಅದರಂತೆ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಮ್‌ನಿಂದ ಹಿಂತಿರುಗಿ ಅಂಪೈರ್‌ಗಳ ಜೊತೆ ಕೈ ಕುಲುಕಿದ್ದಾರೆ.
ಇದೀಗ ಡ್ರೆಸ್ಸಿಂಗ್ ರೂಮ್‌ನಿಂದ ಹೊರ ಬಂದು ಅಂಪೈರ್‌ಗಳ ಕೈಕುಲುಕುವಂತೆ ಕೇಳಿಕೊಳ್ಳುತ್ತಿರುವ ಗೌತಮ್ ಗಂಭೀರ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಶೇಕ್‌ಹ್ಯಾಂಡ್ ವಿವಾದ ಮುಂದುವರೆದಿದೆ. ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು.
ಭಾರತೀಯ ಆಟಗಾರರ ಈ ನಡೆಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಟೂರ್ನಿಯಿಂದ ಹಿಂದೆ ಸರಿಯುವ ಗೊಡ್ಡು ಬೆದರಿಕೆಯೊಡ್ಡಿದ್ದರು.