Home Advertisement
Home ಕ್ರೀಡೆ IPL ಅಂಗಳದಲ್ಲಿ ಮಾಟಮಂತ್ರ; ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೀತಾ ಕ್ಷುದ್ರ ಪೂಜೆ? ಲಲಿತ್ ಮೋದಿ ಸ್ಫೋಟಕ ಹೇಳಿಕೆ

IPL ಅಂಗಳದಲ್ಲಿ ಮಾಟಮಂತ್ರ; ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೀತಾ ಕ್ಷುದ್ರ ಪೂಜೆ? ಲಲಿತ್ ಮೋದಿ ಸ್ಫೋಟಕ ಹೇಳಿಕೆ

0
21

ಕ್ರಿಕೆಟ್ ಎಂದರೆ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಜಿದ್ದಾಜಿದ್ದಿ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ ಐಪಿಎಲ್‌ನ ಈ ಗ್ಲಾಮರ್ ಲೋಕದ ಹಿಂದೆ ವಿಚಿತ್ರವಾದ ಕರಾಳ ಮುಖವೊಂದು ಅಡಗಿದೆಯೇ ಎನ್ನುವ ಅನುಮಾನ ಈಗ ದಟ್ಟವಾಗಿ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು, ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಮಾಡಿರುವ ಒಂದು ಸ್ಫೋಟಕ ಟ್ವೀಟ್!

ಎಲ್ಲವೂ ಶುರುವಾಗಿದ್ದು ಏಪ್ರಿಲ್ 18, 2024ರಂದು ಹೈದರಾಬಾದ್‌ನಲ್ಲಿ ನಡೆದ ಸಿಎಸ್‌ಕೆ ಮತ್ತು ಎಸ್‌ಆರ್‌ಹೆಚ್ ನಡುವಿನ ಪಂದ್ಯದಿಂದ. ಆ ಪಂದ್ಯದಲ್ಲಿ ಚೆನ್ನೈನ ಸ್ಟಾರ್ ಆಟಗಾರ ಶಿವಂ ದುಬೆ ಕ್ರೀಸ್‌ನಲ್ಲಿದ್ದಾಗ, ಕ್ಯಾಮೆರಾ ಕಣ್ಣುಗಳು ಅಚಾನಕ್ಕಾಗಿ ಗ್ಯಾಲರಿಯಲ್ಲಿದ್ದ ಒಬ್ಬ ಹೈದರಾಬಾದ್ ಅಭಿಮಾನಿಯ ಮೇಲೆ ಬಿದ್ದವು. ಆ ವ್ಯಕ್ತಿ ಕೈಯಲ್ಲಿ ಒಂದು ನಿಂಬೆಹಣ್ಣನ್ನು ಹಿಡಿದು, ಮಂತ್ರ ಪಠಿಸುತ್ತಾ ಮೈದಾನದ ಕಡೆಗೆ ವಿಚಿತ್ರವಾಗಿ ಕೈ ಸನ್ನೆ ಮಾಡುತ್ತಿದ್ದ. ಕಾಕತಾಳೀಯವೆಂಬಂತೆ, ಅದರ ಮುಂದಿನ ಎಸೆತದಲ್ಲೇ ದುಬೆ ಕ್ಲೀನ್ ಬೌಲ್ಡ್ ಆದರು. ಅಷ್ಟೇ, ಸಾಮಾಜಿಕ ಜಾಲತಾಣಗಳಲ್ಲಿ ‘ಲೆಮನ್ ಮ್ಯಾನ್’ ಬಗ್ಗೆ ಮೀಮ್‌ಗಳ ಸುನಾಮಿಯೇ ಎದ್ದಿತು.

ಆದರೆ ಈ ತಮಾಷೆ ಸೀರಿಯಸ್ ಆದದ್ದು ಯಾವಾಗ ಎಂದರೆ, ಸಿಎಸ್‌ಕೆ ತಂಡದ ಹೆಸರಿನಲ್ಲಿ ಒಂದು ಅಧಿಕೃತ ಎನ್ನಲಾದ ಪತ್ರ ವೈರಲ್ ಆದಾಗ. ಆ ಪತ್ರದಲ್ಲಿ, “ಹೈದರಾಬಾದ್ ಅಭಿಮಾನಿಗಳು ಕಪ್ಪು ಬಟ್ಟೆ ಮತ್ತು ವಿಚಿತ್ರ ಚಿಹ್ನೆಗಳನ್ನು ಬಳಸಿ ಸಿಎಸ್‌ಕೆ ಆಟಗಾರರ ಮೇಲೆ ಮಾಟಮಂತ್ರ ಮಾಡಿದ್ದಾರೆ, ಇದರ ಬಗ್ಗೆ ಬಿಸಿಸಿಐ ತನಿಖೆ ನಡೆಸಬೇಕು” ಎಂದು ಬರೆಯಲಾಗಿತ್ತು. ಈ ಪತ್ರವು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಸಹಿಯನ್ನೇ ಹೋಲುವಂತೆ ಇತ್ತು. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದುಬಂದ ಸತ್ಯವೇನೆಂದರೆ, ಆ ಪತ್ರ ಸಂಪೂರ್ಣ ನಕಲಿ ಮತ್ತು ಅದನ್ನು ಕೇವಲ ಸ್ಯಾಟೈರ್ ಅಥವಾ ತಮಾಷೆಗಾಗಿ ಸೃಷ್ಟಿಸಲಾಗಿತ್ತು.

ಇನ್ನು ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ! ಈ ನಕಲಿ ಪತ್ರಕ್ಕೆ ಪ್ರತಿಕ್ರಿಯಿಸಿದ ಲಲಿತ್ ಮೋದಿ, ಇಡೀ ಕ್ರಿಕೆಟ್ ಲೋಕವೇ ಬೆಚ್ಚಿಬೀಳುವಂತಹ ಹೇಳಿಕೆ ನೀಡಿದರು. “ಇದು ನಗು ತರಿಸುವ ವಿಷಯವಲ್ಲ, ಐಪಿಎಲ್ ಮಾಲೀಕರು ನಿಜವಾಗಿಯೂ ಇಂತಹ ಕೆಲಸ ಮಾಡುತ್ತಾರೆ” ಎಂದು ಅವರು ಬಾಂಬ್ ಸಿಡಿಸಿದರು. 2011ರ ಸೀಸನ್‌ನಲ್ಲಿ ಒಬ್ಬ ಪ್ರಭಾವಿ ತಂಡದ ಮಾಲೀಕರು ಎದುರಾಳಿ ತಂಡದ ಡ್ರೆಸ್ಸಿಂಗ್ ರೂಮ್‌ಗೆ ನುಗ್ಗಿ ಮಾಟಮಂತ್ರದ ತಂತ್ರಗಳನ್ನು ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದರು. ಅಂದು ತಾನು ಆ ತಂಡದ ಮಾಲೀಕರಿಗೆ ಸೂಕ್ತ ಸಾಕ್ಷ್ಯಗಳೊಂದಿಗೆ ಎಚ್ಚರಿಕೆ ನೀಡಿದ್ದೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಇಷ್ಟಕ್ಕೇ ನಿಲ್ಲದ ಮೋದಿ, “ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಕಾಂಕ್ರೀಟ್ ಸಾಕ್ಷಿ ನನ್ನ ಬಳಿ ಇದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ನನ್ನ ಸಿನಿಮಾ ಅಥವಾ ಟೆಲಿವಿಷನ್ ಸರಣಿಯಲ್ಲಿ ಆ ತಂಡದ ಮಾಲೀಕರ ಹೆಸರನ್ನು ನಾನು ಬಹಿರಂಗಪಡಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಈ ಹೇಳಿಕೆ ಕೇಳಿ ಕ್ರಿಕೆಟ್ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. “ಲಂಡನ್‌ನಲ್ಲಿ ಕುಳಿತು ಪೋಸ್ಟ್ ಹಾಕುವ ಬದಲು ಭಾರತಕ್ಕೆ ಬಂದು ಸತ್ಯ ಹೇಳಿ” ಎಂದು ಕೆಲವರು ಮೋದಿಯವರ ಕಾಲೆಳೆದರೆ, ಇನ್ನು ಕೆಲವರು ಐಪಿಎಲ್‌ನ ಈ ಒಳಜಗತ್ತಿನ ರಹಸ್ಯಗಳನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಇದು ಬರಿ ಮೂಢನಂಬಿಕೆಯೋ ಅಥವಾ ಕ್ರಿಕೆಟ್ ಅಂಗಳದ ಕರಾಳ ಸತ್ಯವೋ ಎಂಬುದು ಲಲಿತ್ ಮೋದಿ ಅವರ ಮುಂದಿನ ನಿರ್ಧಾರದ ಮೇಲೆಯೇ ನಿಂತಿದೆ.