Home Advertisement
Home ಕ್ರೀಡೆ ಕ್ರೀಡಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಬಜೆಟ್‌ನಲ್ಲಿ ಮಹತ್ವದ ಯೋಜನೆಗಳು

ಕ್ರೀಡಾ ಕ್ಷೇತ್ರಕ್ಕೆ ಹೊಸ ಚೈತನ್ಯ: ಬಜೆಟ್‌ನಲ್ಲಿ ಮಹತ್ವದ ಯೋಜನೆಗಳು

0
148

ಬೆಂಗಳೂರು: ರಾಜ್ಯದಲ್ಲಿ ಯುವಜನತೆ ಮತ್ತು ಕ್ರೀಡಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2026–27ರಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ, ಯುವಜನತೆಗೆ ತರಬೇತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರ ಗಮನ ಹರಿಸಿದೆ.

ರಾಜಧಾನಿ ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಪಬ್ಲಿಕ್–ಪ್ರೈವೇಟ್ ಪಾಲುದಾರಿಕೆ (PPP) ಮಾದರಿಯಲ್ಲಿ Kayaking ಮತ್ತು Canoeing Centre of Excellence ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ಇದು ಜಲಕ್ರೀಡೆಗಳ ಅಭ್ಯಾಸ ಮತ್ತು ತರಬೇತಿಗೆ ಪ್ರಮುಖ ಕೇಂದ್ರವಾಗಲಿದೆ.

ಲೈವ್ ವಿಡಿಯೋ: ನೋಡಿ Karnataka Budget 2026 LIVE | CM Siddaramaiah Budget in Karnataka Assembly | Samyukta Karnataka

ಇದಲ್ಲದೆ, ‘ಸಶಕ್ತ ಕರ್ನಾಟಕ’ ಕಾರ್ಯಕ್ರಮದಡಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ ಮತ್ತು ಹಂಪಿ ನಗರಗಳಲ್ಲಿ ರಾಷ್ಟ್ರಮಟ್ಟದ ಮ್ಯಾರಾಥಾನ್ ಸ್ಪರ್ಧೆಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ರಾಜ್ಯದ 10 ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಮ್ಯಾರಾಥಾನ್‌ಗಳನ್ನು ನಡೆಸಲಾಗುವುದು.

ಮೈಸೂರಿನ ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡೋಮ್ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಿಸಿದ್ದು, ಇದು ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ತರಬೇತಿ ನೀಡುವ ಕೇಂದ್ರವಾಗಲಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಂಗಾರಪೇಟೆ, ಮುದ್ದೇಬಿಹಾಳ, ಗುಳೇದಗುಡ್ಡ, ಕನಕಪುರ, ಕುಕನೂರು ಮತ್ತು ಮಸ್ಕಿ ನಗರಗಳಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು.

ಇದೇ ವೇಳೆ, ಕಲಬುರಗಿಯಲ್ಲಿ PPP ಮಾದರಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭಿಸಲು ಸರ್ಕಾರ ಮುಂದಾಗಿದೆ. ಇದು ಕ್ರೀಡಾಪಟುಗಳ ಆರೋಗ್ಯ, ಶಾರೀರಿಕ ಸಾಮರ್ಥ್ಯ ಮತ್ತು ತರಬೇತಿ ಕುರಿತು ವಿಜ್ಞಾನಾಧಾರಿತ ನೆರವು ಒದಗಿಸಲಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ವಸತಿ ನಿಲಯ ನಿರ್ಮಾಣ ಮಾಡಲಾಗುವುದು. ಜೊತೆಗೆ ಬೆಳಗಾವಿ ಜಿಲ್ಲೆಯ ಬೆಳಗುಂದಿಯಲ್ಲಿ ಕುಸ್ತಿ ಅಖಾಡ ನಿರ್ಮಾಣ ಮಾಡುವ ಯೋಜನೆಯೂ ಘೋಷಿಸಲಾಗಿದೆ.

ಈ ಯೋಜನೆಗಳ ಮೂಲಕ ರಾಜ್ಯದ ಯುವಜನತೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ಕರ್ನಾಟಕವನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮುಂದಾಳತ್ವದ ರಾಜ್ಯವಾಗಿಸಲು ಸರ್ಕಾರ ಮುಂದಾಗಿದೆ.

“ಕರ್ನಾಟಕ ಬಜೆಟ್ 2026 ಕುರಿತ ಇನ್ನಷ್ಟು ಪ್ರಮುಖ ಘೋಷಣೆಗಳ ಅಪಡೆಟ್‌ಗಾಗಿ ನಮ್ಮೊಂದಿಗೆ ಮುಂದುವರಿಯಿರಿ.”