ಗುವಾಹಟಿ: ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 12 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳ ಜಯ ಸಾಧಿಸಿತು.
202 ರನ್ಗಳ ಗುರಿ ಬೆನ್ನಟ್ಟಿ ರಾಜಸ್ಥಾನ ತಂಡ ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತಾದರೂ ವೈಭವ್ ಆರ್ಭಟವನ್ನು ನಿಲ್ಲಿಸುವಲ್ಲಿ ಆರ್ಸಿಬಿ ಪರದಾಡಬೇಕಾಯಿತು.
ಆರಂಭದಿಂದಲೇ ಮನಸೋಇಚ್ಛೆ ಆರ್ಸಿಬಿ ಬೌಲರ್ಗಳನ್ನು ದಂಡಿಸಿದ ವೈಭವ್ ಕೇವಲ 15 ಎಸೆತದಲ್ಲಿಯೇ ಅರ್ಧಶತಕ ಪೂರೈಸಿದರು. ಅಂತಿಮವಾಗಿ 26 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್ ನೆರವಿನಿಂದ 78 ರನ್ಗಳಿಸಿ ಕೃನಾಲ್ ಪಾಂಡ್ಯ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಹೊರನಡೆದರು.
ವೈಭವ್ ಮತ್ತು ಧ್ರುವ್ ಜುರೆಲ್ ಜೋಡಿ ಕೇವಲ 37 ಎಸೆತದಲ್ಲಿ ಶತಕದ 108 ರನ್ಗಳ ಜತೆಯಾಟ ನಡೆಸಿತು. ಶಿಮ್ರಾನ್ ಹೆಟ್ಮೆಯರ್ ಮೊದಲ ಎಸೆತದಲ್ಲಿಯೇ ಔಟಾದರೆ, ರಿಯಾನ್ ಪರಾಗ್ ಕೇವಲ 3 ರನ್ ಮಾತ್ರ ಗಳಿಸಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಧ್ರುವ್ ಜುರೆಲ್ 43 ಎಸೆತಗಳಲ್ಲಿ 81 ರನ್ ಗಳಿಸಿ ಅಜೇಯರಾಗಿ ಉಳಿದರು. ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ಗಳಿಸಿತು. ಇನ್ನಿಂಗ್ಸ್ ಆರಂಭದ ಮೊದಲ ಎಸತದಲ್ಲಿಯೇ ಫಿಲಿಪ್ ಸಾಲ್ಟ್ ವಿಕೆಟ್ ಕಳೆದುಕೊಂಡು ಆರ್ಸಿಬಿ ಆಘಾತಕ್ಕೊಳಗಾಯಿತು.
ವಿರಾಟ್ ಕೊಹ್ಲಿ ಜತೆಯಾದ ದೇವದತ್ತ ಪಡಿಕ್ಕಲ್ ಕ್ರಿಸ್ಗೆ ಬರುತ್ತಿದ್ದಂತೆ ಬೌಲರ್ಗಳನ್ನು ದಂಡಿಸಲು ಆರಂಭಿಸಿದರು. ಕೇವಲ 7 ಎಸೆತದಲ್ಲಿ 3 ಬೌಂಡರಿಗಳಿಂದ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
3 ಓವರ್ಗಳಲ್ಲಿ 45 ರನ್ಗಳಿಸಿ ಉತ್ತಮ ರನ್ರೇಟ್ ಹೊಂದಿದ್ದ ಆರ್ಸಿಬಿಗೆ ಮೂರನೇ ಓವರ್ನ ಕೊನೆಯ ಎಸೆತದಲ್ಲಿಯೇ ಪಡಿಕ್ಕಲ್ ಔಟಾದರು. 16 ಎಸೆತದಲ್ಲಿ 7 ಬೌಂಡರಿಗಳೊಂದಿಗೆ 32 ರನ್ಗಳಿಸಿ ಆರ್ಭಟಿಸುತ್ತಿದ್ದ ವಿರಾಟ್ ಕೊಹ್ಲಿ ಕೂಡ ಐದನೇ ಓವರ್ನ ಐದನೇ ಎಸೆತದಲ್ಲಿ ಔಟಾದರು.
ಐದು ಓವರ್ಗಳಾಗುವ ಹೊತ್ತಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ಬಳಿಕ ಕೃನಾಲ್ ಪಾಂಡ್ಯ (1), ಜಿತೇಶ್ ಶರ್ಮಾ (5), ಟೀಮ್ ಡೇವಿಡ್ (13) ಅವರನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿತವನ್ನು ಕಾಣುತ್ತಿತ್ತು.
ಇನ್ನೊಂದು ತುದಿಯಲ್ಲಿ ನಾಯಕ ರಜತ್ ಪಾಟೀದಾರ್ ಆರ್ಆರ್ ಬೌಲರ್ಗಳನ್ನು ದಂಡಿಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ವಿಕೆಟ್ಗಳು ಉರುಳುತ್ತಿದ್ದವು.
ರೊಮಾರಿಯೋ ಶೆಫರ್ಡ್ 11 ಎಸೆತದಲ್ಲಿ 22 ರನ್ ಮತ್ತು ವೆಂಕಟೇಶ್ ಅಯ್ಯರ್ ಕೇವಲ 15 ಎಸೆತದಲ್ಲಿ 1 ಬೌಂಡರಿ, 2 ಸಿಕ್ಸರ್ನಿಂದ 29 ರನ್ಗಳಿಸಿ ತಂಡವನ್ನು ಇನ್ನೂರರ ಗಡಿ ದಾಟಿಸಿದರು.
ಜೋಫ್ರಾ ಆರ್ಚರ್, ರವಿ ಬಿಷ್ನೋಯಿ, ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಉರುಳಿಸಿದರು.























