ಕೋಲ್ಕತ್ತಾ: ನಾಯಕ ಅಜಿಂಕ್ಯಾ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಂಘಟಿತ ಪ್ರದರ್ಶನದಿಂದಾಗಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸವಾಲಿನ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಲಖನೌ ಅಂದುಕೊಂಡಂತೆ ಆರಂಭದಲ್ಲಿಯೇ ಕೋಲ್ಕತ್ತಾದ ಸ್ಟಾರ್ ಆಟಗಾರ ಫಿನ್ ಅಲೆನ್ (9) ಅವರ ವಿಕೆಟ್ ಉರುಳಿಸಿತಾದರೂ ಅಂಜಿಕ್ಯಾರನ್ನು ಕಟ್ಟಿಹಾಕುವಲ್ಲಿ ತಡಮಾಡಿತು.
ರಹಾನೆ ಮತ್ತು ರಘುವಂಶಿ ಜೋಡಿ 84 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ವೇಳೆ ನಾಯಕ ರಹಾನೆ 24 ಎಸೆತದಲ್ಲಿ 41 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಅವರ ಹಿಂದೆಯೇ ರಘುವಂಶಿ ಕೂಡ 33 ಎಸೆತದಲ್ಲಿ 45 ರನ್ ಗಳಿಸಿ ಸಿದ್ಧಾರ್ಥ ಎಸೆತದಲ್ಲಿ ಮಾಕ್ರಂಗೆ ಕ್ಯಾಚ್ ನೀಡಿ ಹೊರನಡೆದರು. ಆದರೆ ರಿಂಕು ಸಿಂಗ್ ಇಂದು ಕೇವಲ 4 ರನ್ ಕಾಣಿಕೆ ನೀಡಿ ಔಟಾದರು.
18 ಎಸೆತಗಳಲ್ಲಿ ಕೇವಲ 12 ರನ್‌ಗಳ ಅಂತರದಲ್ಲಿ ಕೋಲ್ಕತ್ತಾ ಪ್ರಮುಖ 3 ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ಯಾಮರೂನ್ ಗ್ರೀನ್ ಮತ್ತು ರೋವ್‌ಮನ್ ಪೊವೆಲ್ ಜೋಡಿ ಕೊನೆಯ 40 ಎಸೆತಗಳಲ್ಲಿ 70 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಲಖನೌ ಪರ ದಿಗ್ವೇಶ್ ಸಿಂಗ್ ರಥಿ, ಮಣಿಮಾರನ್ ಸಿದ್ಧಾರ್ಥ್, ಅವೇಶ್ ಖಾನ್ ಮತ್ತು ಯಾದವ್ ತಲಾ ಒಂದು ವಿಕೆಟ್ ಪಡೆದರು.























