Home Advertisement
Home ಕ್ರೀಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಭಾರತ

ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಭಾರತ

0
7

ಅಹಮದಾಬಾದ್: ಕಳೆದ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನೇ ನೆನಪಿಸುವಂತಿದೆ ಇಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ.

ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಭಾರಿ ಲಾಭಗಳಿವೆ. ಸೂಪರ್ 8 ದಾಟಿ ಸೆಮಿಸ್ ಹಾದಿ ಸುಲಭ ಮಾಡಿಕೊಳ್ಳಲು ಈ ಪಂದ್ಯ ವೇದಿಕೆಯಾಗಲಿದೆ. ಉಭಯ ತಂಡಗಳಲ್ಲೂ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದ್ದು, ಬ್ಯಾಟಿಂಗ್‌ಗೆ ನೆರವಾಗಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೌಂಡರಿ-ಸಿಕ್ಸರ್‌ಗಳ ಮೇಳವೇ ನೋಡಲು ಸಿಗಲಿದೆ.

ಆದ್ರೆ, ಈ ಪಂದ್ಯದಲ್ಲಿ ಯಾರು ನೆಚ್ಚಿನ ತಂಡ ಎಂದು ನಿರ್ಧರಿಸುವುದು ಸ್ವಲ್ಪ ಕಷ್ಟವಾಗಿದೆ. ಸ್ವದೇಶಿ ನೆಲದಲ್ಲಿ ಆಡುತ್ತಿರುವ ಭಾರತ ತಂಡ ಲೀಗ್ ಹಂತದಲ್ಲಿ ಇದೇ ಪಿಚ್‌ನಲ್ಲಿ ಒಂದು ಪಂದ್ಯವನ್ನಷ್ಟೇ ಆಡಿದೆ. ಆದ್ರೆ, ದಕ್ಷಿಣ ಆಫ್ರಿಕಾ ತಂಡ ಮಾತ್ರ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಈ ಪಿಚ್‌ನಲ್ಲಿ ಆಡಿ ಗೆದ್ದಿದೆ. ಅದರಲ್ಲೂ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧದ ಗೆಲುವಂತೂ ದಕ್ಷಿಣ ಆಫ್ರಿಕಾ ತಂಡದ ಆತ್ಮವಿಶ್ವಾಸವನ್ನೇ ಹೆಚ್ಚಿಸಿದೆ.

ಉಭಯ ತಂಡಗಳು ಲೀಗ್ ಹಂತದಲ್ಲಿ ಸೋಲಿಲ್ಲದ ಸರದಾರರಾಗಿ ಹೊರಹೊಮ್ಮಿದ್ದರೂ, ದಕ್ಷಿಣ ಅಫ್ರಿಕಾ ಬಲಿಷ್ಠ ತಂಡಗಳನ್ನು ಮಣಿಸಿದೆ. ಹಾಗಾಗಿ, ಇಂದು ಭಾರತಕ್ಕೆ ಗೆಲುವು ಕಬ್ಬಿಣದ ಕಡಲೆ ಎನ್ನಿಸಿಕೊಂಡಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ಟಿ20 ವಿಶ್ವಕಪ್‌ನಲ್ಲಿ ಸತತ 12 ಗೆಲುವುಗಳನ್ನು ಕಂಡಿರುವ ಭಾರತಕ್ಕೆ ಈಗ 13ನೇ ಗೆಲುವು ಸಾಧಿಸುವ ತವಕ. ಆದ್ರೆ, ಇಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಗೆಲುವು ಬಿಟ್ಟುಕೊಡುವ ಸಾಧ್ಯತೆಗಳೇ ಇಲ್ಲ. ಹೀಗಾಗಿ, ಇಂದಿನ ಸೂಪರ್ 8 ಪಂದ್ಯ ಭಾರಿ ಕುತೂಹಲ ಮೂಡಿಸಿದೆ.

ಉಭಯ ತಂಡಗಳ ಆಟಗಾರರಲ್ಲಿ ಹೆಚ್ಚು ಇಶಾನ್ ಕಿಶನ್ ಹಾಗೂ ಅತ್ತ ಏಡೇನ್ ಮಾರ್ಕ್ರಂ ಇಂದಿನ ಪಂದ್ಯದ ಟ್ರಂಪ್‌ಕಾರ್ಡ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ, ಭಾರತದ ಆರಂಭಿಕರಲ್ಲಿ ಅಭಿಷೇಕ್ ಶರ್ಮಾ ಪಾತ್ರ ಹೇಗಿರಲಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಇದೆ.

ಸಂಜು ಸ್ಯಾಮ್ಸನ್‌ರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆಯೂ ತಳ್ಳಿ ಹಾಕುವಂತಿಲ್ಲ. ತಿಲಕ್ ವರ್ಮಾ ಅವರಿಗೆ ತಂಡದ ಮ್ಯಾನೇಜ್‌ಮೆಂಟ್ ಕೊಂಚ ತಾಳ್ಮೆಯ ಬ್ಯಾಟಿಂಗ್ ನಡೆಸುವಂತೆ ಸೂಚಿಸಿದೆ ಎನ್ನಲಾಗಿದೆ.

ಉಳಿದಂತೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಹಾಗೂ ಶಿವಂ ದುಬೆ ಸ್ಥಾನಗಳೂ ಅಭಾದಿತ ಎನ್ನಿಸಿಕೊಂಡಿದ್ದು, ಮತ್ತೊಮ್ಮೆ ಸ್ಪಿನ್ನರ್‌ಗಳ ಪಂದ್ಯವಾಗಬಹುದು. ಹಾಗಾಗಿ, ವೇಗಿಗಳ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಅರ್ಶದೀಪ್ ಸಿಂಗ್‌ಗೆ ಸ್ಥಾನ ನೀಡಬಹುದು.

ದಕ್ಷಿಣ ಆಫ್ರಿಕಾದ ತಂಡದಲ್ಲಿ ಸದ್ಯ ಭಾರತಕ್ಕೆ ಬೌಲರ್‌ಗಳೇ ದೊಡ್ಡ ತಲೆನೋವಾಗಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಲುಂಗಿ ಇಂಗ್ಡಿ ವಾಪಸ್ ಬರುವ ಸಾಧ್ಯತೆಗಳಿದ್ದು, ಹೆನ್ರಿ ನೋಕಿಯೇ ಹಾಗೂ ಕಾಗಿಸೋ ರಬಾಡ ಆಡೋದು ಗ್ಯಾರೆಂಟಿ. ಈ ಬೌಲರ್‌ಗಳೆದುರು ಭಾರತದ ಬ್ಯಾಟರ್‌ಗಳು ಸಮರ್ಥವಾಗಿ ಬ್ಯಾಟಿಂಗ್ ನಡೆಸಬೇಕಿದೆ.

ಈ ಪಿಚ್‌ನಲ್ಲಿ 200 ರನ್‌ಗಳನ್ನು ಬಾರಿಸಿದರೂ, ಯಶಸ್ವಿಯಾಗಿ ಚೇಸ್ ಮಾಡಬಹುದಾಗಿದೆ. ಹಾಗಾಗಿ, ಟಾಸ್ ಗೆದ್ದ ತಂಡ ಕ್ಷೇತ್ರರಕ್ಷಣೆ ಆಯ್ದುಕೊಳ್ಳಬಹುದು.

Previous articleಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ
Next articleಮಕ್ಕಳ ಶಾಲಾ ಬ್ಯಾಗ್ ಹೊರೆ ತಗ್ಗಿಸಲಿದೆ ಜಿಯೋ – ಶಿಕ್ಷಾ ಕ್ಲಾಸ್ ರೂಮ್