ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಜಯದೊಂದಿಗೆ ಭಾರತ ಸರಣಿಯಲ್ಲಿ ಮತ್ತೆ ಹಿಂತಿರುಗಿದ್ದು, ಅಭಿಮಾನಿಗಳಿಗೆ ಹರ್ಷದ ಅಲೆ ತಂದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 187 ರನ್‌ಗಳ ಭರ್ಜರಿ ಮೊತ್ತವನ್ನು ಕಲೆಹಾಕಿತು. ಪ್ರತಿಯಾಗಿ ಕಣಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡು, ಕ್ರಮವಾಗಿ ವಿಕೆಟ್‌ಗಳನ್ನು ಕಳೆದುಕೊಂಡರೂ ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಜಿತೇಶ್ ಶರ್ಮಾ ಅವರ ಅದ್ಭುತ ಆಟದ ಬಲದಿಂದ ಗುರಿ ಮುಟ್ಟಿತು.
ಭಾರತದ ಪರ ಅಭಿಷೇಕ್ ಶರ್ಮಾ (25), ಶುಭ್ ಮನ್ ಗಿಲ್ (15), ಸೂರ್ಯಕುಮಾರ್ ಯಾದವ್ (24), ತಿಲಕ್ ವರ್ಮಾ (29), ಅಕ್ಸರ್ ಪಟೇಲ್ (17) ರನ್ ಗಳಿಸಿದರು. ಕೊನೆಯ ಹಂತದಲ್ಲಿ ವಾಷಿಂಗ್ಟನ್ ಸುಂದರ್ (49*) ಬಾರಿಸಿ ತಂಡದ ಗೆಲುವಿಗೆ ಮುನ್ನಡೆಸಿದರು.
ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ 3 ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದರೂ ಉಳಿದ ಬೌಲರ್‌ಗಳು ಭಾರತ ಬ್ಯಾಟರ್‌ಗಳ ವಿರುದ್ಧ ಪರಿಣಾಮಕಾರಿ ಆಗಲಿಲ್ಲ. ಬಾರ್ಟ್ಲೆಟ್ ಮತ್ತು ಮಾರ್ಕಸ್ ಸ್ಟಾಯ್ನಿಸ್ ತಲಾ ಒಂದು ವಿಕೆಟ್ ಪಡೆದರು.
ಮೊದಲೆರಡು ಪಂದ್ಯಗಳಲ್ಲಿ ಮಳೆ ಮತ್ತು ಸೋಲಿನಿಂದ ಹಿನ್ನಡೆ ಅನುಭವಿಸಿದ್ದ ಭಾರತ ಈ ಮೂರನೇ ಪಂದ್ಯದಲ್ಲಿ ಬಲಿಷ್ಠ ಹೋರಾಟ ತೋರಿದೆ. ಸರಣಿಯ ನಾಲ್ಕನೇ ಪಂದ್ಯಕ್ಕಾಗಿ ಈಗ ಉಭಯ ತಂಡಗಳು ಕಾದಿವೆ.


























