ತಿರುವನಂತಪುರಂ: ವಿಶಾಖಪಟ್ಟಣದಲ್ಲಿ ಎರಡಕ್ಕೆ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಈಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಹಾಗಾಗಿಯೇ ಇಂದಿನಿಂದ ಮುಂದಿನ 3 ಟಿ20 ಪಂದ್ಯಗಳನ್ನು ತಿರುವನಂತಪುರಂನಲ್ಲಿ ಆಡಲಿದ್ದು, ಇಂದೇ ಸರಣಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದೆ.
ಕಳೆದೆರಡು ಪಂದ್ಯಗಳಲ್ಲಿ ಗಮನಿಸಿದಾಗ ಭಾರತ ಎಲ್ಲಾ ವಿಭಾಗಗಳಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದೆ. ವಿಶಾಖಪಟ್ಟಣದಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಭಾರತ ಯಶಸ್ವಿಯಾಗಿ ಚೇಸಿಂಗ್ ಮಾಡಿ ಗೆದ್ದುಕೊಂಡಿತ್ತು. ಹಾಗಾಗಿ, ಇಲ್ಲಿ ಬ್ಯಾಟರ್‌ಗಳಿಗಿಂತ ಬೌಲರ್‌ಗಳ ಶ್ರಮ ಹೆಚ್ಚು ಪ್ರಶಂಸೆಗೆ ಒಳಗಾಯಿತು.
ಎರಡೂ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಲಂಕಾದ ಬ್ಯಾಟ್ಸ್‌ಮನ್‌ಗಳು ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾದರೂ, 130 ಕ್ಕಿಂತ ಕಡಿಮೆ ಮೊತ್ತವನ್ನಷ್ಟೇ ಗಳಿಸಿದ್ದು ಸೋಲಿಗೆ ಕಾರಣವಾಗಿದೆ. ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾದರೂ ಫಲಿತಾಂಶಗಳು ಬದಲಾಗುತ್ತಿಲ್ಲ.
ಜೂನ್ 12 ರಿಂದ ಪ್ರಾರಂಭವಾಗುವ ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮ ಅವಕಾಶಗಳನ್ನು ಬಳಸಿಕೊಳ್ಳುವ ಹಾಗೂ ತಂಡವನ್ನು ಸೂಕ್ತವಾಗಿ ಕಟ್ಟಿಕೊಳ್ಳಲು ಈಗ ಅವಕಾಶವಿದ್ದು, ಹೊಸ ಮುಖಗಳಿಗೆ ಸ್ಥಾನ ಭದ್ರ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶ.
ವೈಷ್ಣವಿ ಮೇಲೆ ನಿರೀಕ್ಷೆ: ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮಧ್ಯಪ್ರದೇಶದ ವೈಷ್ಣವಿ ಶರ್ಮಾ ಮೇಲೆ ಭಾರಿ ನಿರೀಕ್ಷೆಗಳಿವೆ. ಸರಣಿಯ 2ನೇ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದ ಈಕೆ, ಕೊನೆಯ ಓವರ್‌ನಲ್ಲಿ 4 ವಿಕೆಟ್‌ಗಳು ಉರುಳುವಂತೆ ಮಾಡಿದರು. ಅಲ್ಲದೇ, ಆತಿಥೇಯ ಭಾರತ ತಂಡದ ಮತ್ತೊಬ್ಬ ಹೊಸಮುಖ ಎನ್ನಿಸಿಕೊಂಡಿರುವ ಜಿ. ಕಮಲಿನಿ ಕೂಡ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ, ಈ ಹೊಸಬರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.
ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿದ್ದು, ಮಹಿಳೆಯರ ಭಾರತ ತಂಡ ಇಲ್ಲಿ ಯಾವುದೇ ಮಾದರಿಯ ಕ್ರಿಕೆಟ್ ಆಡಿಲ್ಲ. ಆದರೆ ಈ ಪಿಚ್‌ನಲ್ಲಿ ಐದು ಪಂದ್ಯಗಳ ಸರಣಿಯನ್ನು ಗೆಲ್ಲಲು ಮತ್ತೊಂದು ಗೆಲುವಿನತ್ತ ಗಮನ ಹರಿಸಲಿದೆ. ಆದ್ರೆ, ಉಪನಾಯಕಿ ಸ್ಮೃತಿ ಮಂಧಾನ ವೈಫಲ್ಯದಿಂದ ಹೊರಬರಬೇಕಿದೆ.
ಪಿಚ್ ಹೇಗಿದೆ?: ಗ್ರೀನ್‌ಫೀಲ್ಡ್ ಕ್ರೀಡಾಂಗಣವು ಇಲ್ಲಿಯವರೆಗೆ ನಾಲ್ಕು ಪುರುಷರ ಟಿ20ಗಳನ್ನು ಆಯೋಜಿಸಿದೆ, ಮೊದಲ ಮೂರು ಟಿ20ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವು ಸಿಕ್ಕಿಲ್ಲ. ನಂತರ ನಡೆದ ನಾಲ್ಕನೇ ಪಂದ್ಯದಲ್ಲಿ ಫಲಿತಾಂಶ ಉಲ್ಟಾ ಆಗಿತ್ತು. ಶುಕ್ರವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಕಡಿಮೆ ಇರಲಿದೆ ಎನ್ನಲಿದೆ.
150 ವಿಕೆಟ್‌ನತ್ತ ದೀಪ್ತಿ ಶರ್ಮಾ: ಭಾರತದ ದೀಪ್ತಿ ಶರ್ಮಾ 2019ರ ನಂತರ 92 ಟಿ20 ಪಂದ್ಯಗಳನ್ನು ಸತತವಾಗಿ ಆಡಿದ್ದು, ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಆದ್ರೆ, ಟಿ20ಯಲ್ಲಿ 150ನೇ ವಿಕೆಟ್‌ಗೆ ದೀಪ್ತಿ ಶರ್ಮಾ 2 ವಿಕೆಟ್‌ಗಳನ್ನಷ್ಟೇ ಕಬಳಿಸಬೇಕಿದೆ.
3 ಸಾವಿರ ರನ್ ಜೊತೆಯಾಟ: ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಈವರೆಗೂ 84 ಇನ್ನಿಂಗ್ಸ್‌ಗಳಲ್ಲಿ 2,918 ರನ್‌ಗಳಿಸಿದ್ದು 3 ಸಾವಿರ ರನ್ ಪೂರೈಸಲು 82 ರನ್‌ಗಳ ಜೊತೆಯಾಟದ ಅಗತ್ಯವಿದೆ.























