ಇಂದೋರ್: ಭಾರತದಲ್ಲಿ ಏಕದಿನ ಸರಣಿ ಗೆಲ್ಲುವ ಕನಸು ನ್ಯೂಜಿಲೆಂಡಿಗೆ ಈ ಬಾರಿಯಾದರೂ ಈಡೇರುವುದೇ ಅಥವಾ ಈ ವರ್ಷವನ್ನು ಸರಣಿ ಗೆಲುವಿನ ಮೂಲಕ ಭಾರತ ಶುಭಾರಂಭ ಮಾಡುವುದೇ..? ಈ ಎರಡು ಪ್ರಶ್ನೆಗಳಿಗೆ ಇಂದು ನಡೆಯುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಉತ್ತರ ನೀಡಲಿದೆ. ಈವರೆಗೂ ಕಿವೀಸ್ ಭಾರತದಲ್ಲಿ ನಾಲ್ಕು ಬಾರಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಸೇರಿ 16 ಬಾರಿ ಭಾರತಕ್ಕೆ ಬಂದಿದೆ. ಆದ್ರೆ, ಒಮ್ಮೆಯೂ ಸರಣಿ ಗೆದ್ದಿಲ್ಲ. ಮೂರು ಪಂದ್ಯಗಳನ್ನಷ್ಟೇ ಗೆದ್ದಿರುವ ಇತಿಹಾಸ ಹೊಂದಿರುವ ನ್ಯೂಜಿಲೆಂಡ್‌ಗೆ ಇಂದು ಈ ಇತಿಹಾಸವನ್ನು ಅಳಿಸಿ ಹಾಕುವ ಸದಾವಕಾಶ ಸಿಕ್ಕಿದೆ.
2024ರಲ್ಲಿ ಟೆಸ್ಟ್ ಸರಣಿಯನ್ನು ವೈಟ್‌ವಾಶ್ ಮಾಡಿದ ಬಳಿಕ, ಭಾರತ ತಂಡ ಭಾರಿ ಮುಖಭಂಗ ಅನುಭವಿಸಿತ್ತು. ಈಗ ಅದೇ ಸೇಡನ್ನು ತೀರಿಸಿಕೊಳ್ಳಲು ಶುಭಮನ್ ಗಿಲ್ ಪಡೆಯ ತಯಾರಿಯನ್ನು ನಡೆಸಿದೆ. ಆದ್ರೆ, ಭಾರತ ತಂಡ ಅಂತಿಮ ಹನ್ನೊಂದರ ತಂಡವನ್ನು ರಚಿಸುವುದೇ ಕೊಂಚ ಗೊಂದಲಮಯವಾಗಿದೆ.
ಕಳೆದ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ಹೆಚ್ಚು ಬಲಿಷ್ಠ ತಂಡವಾಗಿದೆ. ಆದರೂ ಪಿಚ್ ಹಾಗೂ ಹವಾಮಾನದ ಬದಲಾವಣೆ ಎಂಥಹ ಪಂದ್ಯಕ್ಕಾದರೂ ಸವಾಲು ಎಸೆಯಬಹುದು. ಕಳೆದ 3 ವರ್ಷಗಳಲ್ಲಿ ಅದ್ರಲ್ಲೂ ಸ್ವದೇಶದಲ್ಲಿ ಭಾರತ ಟಾಸ್ ಗೆದ್ದು ಪಂದ್ಯ ಸೋತಿಲ್ಲ. ಹಾಗಾಗಿ ಟಾಸ್ ಸೋತರೆ ನಿಜವಾದ ಸವಾಲು ಎದುರಾಗುತ್ತದೆ.
ಇದನ್ನೂ ಓದಿ: ಬೇಡ್ತಿ – ಅಘನಾಶಿನಿ ನದಿ ತಿರುವು ಸರ್ವೇ ಸದ್ಯಕ್ಕೆ ಇಲ್ಲ
ಕಳೆದ 2ನೇ ಏಕದಿನ ಪಂದ್ಯದಲ್ಲಿ ಮೇಲ್ಪಂಕ್ತಿ ಆಟಗಾರರನ್ನು ಕಟ್ಟಿಹಾಕಿದರೂ, ಮಿಚೆಲ್ ಡೇರಿಯಲ್ ಆಟ ಪಂದ್ಯದ ಗೆಲುವನ್ನು ಕಸಿದುಕೊಂಡಿತು. ಅಲ್ಲದೇ, ಭಾರತ ತಂಡದ ಆಟಗಾರರು ಕೈ ಚೆಲ್ಲಿದ ಅವಕಾಶಗಳಿಂದ ಪಂದ್ಯ ಸೋತು ಸರಣಿ 1-1ರಲ್ಲಿ ಸಮಬಲಗೊಂಡಿದೆ.
ಭಾರತವು ಗಾಯಗೊಂಡ ವಾಷಿಂಗ್ಟನ್ ಸುಂದರ್ ಬದಲಿಗೆ ಆಫ್‌ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಆಯುಷ್ ಬಡೋನಿ ಅವರನ್ನು ಕರೆತಂದಿದ್ದು, ನಿತೀಶ್ ಕುಮಾರ್ ರೆಡ್ಡಿ ಕೂರಿಸುವ ಲೆಕ್ಕಾಚಾರ ನಡೆದಿದೆ. ಅರ್ಷದೀಪ್ ಸಿಂಗ್ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ. ಹರ್ಷಿತ್ ರಾಣಾ, ಸಿರಾಜ್ ಜೊತೆಗೆ ಅರ್ಶದೀಪ್ ವೇಗಿಯಾಗಿ ಕಾಣಿಸಿಕೊಳ್ಳಬಹುದು.
ವೇಗದ 3 ಸಾವಿರ: ಭಾರತ ತಂಡದ ನಾಯಕ ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ಪೂರೈಸಲು 70 ರನ್‌ಗಳಿಸಬೇಕಿದೆ. ಹಶೀಮ್ ಆಮ್ಲಾ 57 ಇನ್ನಿಂಗ್ಸ್‌ಗಳಲ್ಲಿ 3000 ರನ್ ಗಳಿಸಿದ್ದು, ಗಿಲ್ 60 ಇನ್ನಿಂಗ್ಸ್‌ಗಳಲ್ಲಿ 2,930 ರನ್‌ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಗಿಲ್ 2ನೇ ಅತಿ ವೇಗವಾಗಿ 3 ಸಾವಿರ ರನ್ ಬಾರಿಸಿದ ಆಟಗಾರನಾಗುವ ಸಾಧ್ಯತೆಗಳಿವೆ.
ಜುಲೈವರೆಗೆ ಕಾಣಿಸಲ್ಲ ರೋ-ಕೊ: ಸದ್ಯ ಈ ಪಂದ್ಯವೇ ಕೊನೆ. ಈ ವರ್ಷದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರತದ ಜರ್ಸಿಯಲ್ಲಿ ಕಾಣಿಸುವುದು ಮುಂದಿನ ಜುಲೈ 14ರಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ. ಹಾಗಾಗಿ, ಈ ಇಬ್ಬರನ್ನು ಕಣ್ತುಂಬಿಕೊಳ್ಳಲು ಸ್ಟೇಡಿಯಂ ಪ್ರೇಕ್ಷಕರಿಂದ ತುಂಬಿರಲಿದೆ.























