ಧರ್ಮಶಾಲಾ: ಚಂಡೀಗಢದಲ್ಲಿ ಭಾರತದ ವಿರುದ್ಧ ಜಯ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ಸರಣಿ ಸಮಬಲಗೊಳಿಸಿದೆ. ಉಭಯ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸಲು ಭಾನುವಾರ 3ನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
2025ರಲ್ಲಿ ಭಾರತ ಆಡಿದ 17 ಪಂದ್ಯಗಳಲ್ಲಿ 3ನೇ ಸೋಲು ಚಂಡೀಗಢದಲ್ಲಿ ಸಿಕ್ಕಿತ್ತು. ಜನವರಿ ನಂತರ ಭಾರತ ತಂಡ ಟಾಸ್ ಗೆದ್ದು ಪಂದ್ಯ ಸೋತಿದ್ದು ಕೂಡ ಅದೇ ಮೊದಲು. ಈಗ ಸೋಲನ್ನು ಮರೆತು, ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಪಡೆ ಗೆಲುವಿನ ಹಳಿಗೆ ಬರಬೇಕಾಗಿದೆ.
ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವುದಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಪರಿಹಾರವನ್ನೂ ಹುಡುಕಿಕೊಳ್ಳಬೇಕಿದೆ. ಅದರಲ್ಲೂ ನಾಯಕ ಸೂರ್ಯಕುಮಾರ್, ಉಪನಾಯಕ ಶುಭಮನ್ ಗಿಲ್ ಲಯ ತಪ್ಪಿದ್ದು, ಮತ್ತೆ ಲಯ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: 45 ವರ್ಷಗಳ ಐತಿಹಾಸಿಕ ಜಯ: ಥ್ಯಾಂಕ್ಯೂ ತಿರುವನಂತಪುರ ಎಂದ ಮೋದಿ
ಈ ಪಂದ್ಯವೂ ಸೇರಿದಂತೆ ಟಿ20 ವಿಶ್ವಕಪ್‌ಗೆ ಭಾರತ ಇನ್ನು ಕೇವಲ 9 ಪಂದ್ಯಗಳನ್ನಷ್ಟೇ ಆಡಲಿದ್ದು, ಅದಕ್ಕೂ ಮುನ್ನ ತಂಡವನ್ನು ಸಮಯೋಜಿತಗೊಳಿಸಬೇಕಿದೆ. ಸೂರ್ಯನಿಗೆ ಎದುರಾಳಿ ತಂಡದ ಮಾರ್ಕೋ ಯಾನ್ಸೆನ್ ತಲೆನೋವಾಗಿದ್ದಾರೆ. ಇದರ ಮಧ್ಯೆ ಆಲ್‌ರೌಂಡರ್ ಅಕ್ಷರ್ ಪಟೇಲ್ ವಿಚಾರದಲ್ಲೂ ಭಾರತ ಉತ್ತರ ಕಂಡುಕೊಳ್ಳಬೇಕಿದೆ.
ಈ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದೆ. ಟೆಸ್ಟ್‌ನಲ್ಲಿ 2 ಪಂದ್ಯಗಳನ್ನೂ ಗೆಲ್ಲುವುದಲ್ಲದೇ, ಏಕದಿನ ಸರಣಿಯಲ್ಲೂ ಪ್ರಬಲ ಪೈಪೋಟಿ ನೀಡಿತ್ತು. ಈಗ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿ, ಎಚ್ಚರಿಕೆ ನೀಡಿದೆ. ಆದರೆ, ವರುಣ್ ಚಕ್ರವರ್ತಿ ಹಾಗೂ ಜಸ್‌ಪ್ರೀತ್ ಬುಮ್ರಾ ವಿರುದ್ಧ ದಕ್ಷಿಣ ಆಫ್ರಿಕಾ ಕೊಂಚ ಹಿನ್ನಡೆ ಅನುಭವಿಸಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಕೊರತೆಗಳ ಮೇಲೆ ಪ್ರಯೋಗಗಳನ್ನು ಮಾಡಿ ಗೆಲುವು ದಕ್ಕಿಸಿಕೊಳ್ಳಬೇಕಿದೆ.
ಚಂಡೀಗಢದಲ್ಲಿ ಬೌಲರ್ಸ್ ವಿಫಲ: ಚಂಡೀಗಢದಲ್ಲಿ ಭಾರತ ಸೋಲಲು ಪ್ರಮುಖ ಕಾರಣವಾಗಿದ್ದೇ ಬೌಲಿಂಗ್ ವಿಭಾಗ. ಜಸ್‌ಪ್ರೀತ್ ಬುಮ್ರಾರಂತಹ ವೇಗಿಯೇ ಒಂದು ಟಿ20 ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ನೀಡಿದ್ದು ಇದೇ ಮೊದಲಾಗಿತ್ತು. ಅಷ್ಟೇ ಅಲ್ಲದೇ, ಅರ್ಷದೀಪ್ ಸಿಂಗ್ ಒಂದೇ ಇನ್ನಿಂಗ್ಸ್‌ನಲ್ಲಿ 7 ವೈಡ್‌ಗಳನ್ನು ಒಂದೇ ಓವರ್‌ನಲ್ಲಿ ನೀಡಿದ್ದು ಕೂಡ ಮೊದಲು. ಹಾಗಾಗಿ, ಬೌಲಿಂಗ್ ವಿಭಾಗದ ಮೇಲೆ ಸಾಕಷ್ಟು ಗಮನ ಹರಿಸಬೇಕಿದೆ. ಹೆಚ್‌ಪಿಸಿಎಲ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೂ, ರನ್ ಮೊತ್ತವನ್ನು ಉಳಿಸಿಕೊಳ್ಳುವುದು ಕಷ್ಟ. ಹಾಗಾಗಿಯೇ ಇಲ್ಲಿ ನಡೆದ 5 ಟಿ20ಗಳಲ್ಲಿ 4 ಬಾರಿ ಚೇಸಿಂಗ್ ತಂಡ ಗೆದ್ದಿದೆ. ಚಳಿಗಾಲವಾಗಿರುವ ಕಾರಣ, ಶೀತ-ಚಳಿ ಹೆಚ್ಚಿರಲಿದ್ದು, ಬೌಲರ್‌ಗಳಿಗೆ ನೆರವಾಗಲಿದೆ.
50ರತ್ತ ವರುಣ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ 31 ಪಂದ್ಯಗಳಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಪಡೆದರೆ 50 ವಿಕೆಟ್ ಪಡೆದ ಸಾಧನೆಗೆ ವರಣ್ ಹೆಸರು ಸೇರಲಿದೆ.
ಕುಲ್‌ದೀಪ್ ಮೇಲೆ ಹೆಚ್ಚಿನ ನಿರೀಕ್ಷೆ: ಕುಲ್‌ದೀಪ್ ಯಾದವ್ ಇಲ್ಲಿನ ಲೋಕಲ್ ಬಾಯ್ ಆಗಿದ್ದು, ಪಿಚ್‌ನ ಅರಿವು ಇದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಎಲ್ಲರ ಕಣ್ಣು ಕುಲ್‌ದೀಪ್ ಯಾದವ್ ಮೇಲಿದೆ. ಇದೇ ಪಿಚ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಈ ಸ್ಪಿನ್ನರ್ 2024ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದರು. ಹಾಗಾಗಿ, ಇಂದು ಈತನ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.























