ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಬಿಡುಗಡೆಗೊಳಿಸಿದ ಏಕದಿನ ಪುರುಷರ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಗ್ರಸ್ಥಾನಗಳನ್ನು ಸಂಪಾದಿಸಿದ್ದಾರೆ.
ನೂತನ ರ‍್ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ 781 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 773 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 2021ರ ಏಪ್ರಿಲ್‌ನಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದ ರೋಹಿತ್, ಮತ್ತೊಮ್ಮೆ ನಂಬರ್ 1 ಬ್ಯಾಟರ್ ಆಗಿದ್ದಾರೆ.
ಈ ರೀತಿ ಈ ಇಬ್ಬರು ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ 302 ರನ್‌ಗಳಿಸಿದ ವಿರಾಟ್ 2 ಶತಕ ಹಾಗೂ 1 ಅರ್ಧಶತಕವನ್ನು ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಹಾಗಾಗಿ, ನ್ಯೂಜಿಲೆಂಡ್‌ನ ಡೆರಿಲ್ ಮಿಚೇಲ್, ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ ಅವರನ್ನು ಹಿಂದಿಕ್ಕಿ 4ನೇ ಸ್ಥಾನದಿಂದ ವಿರಾಟ್ 2 ಸ್ಥಾನ ಜಿಗಿದಿದ್ದಾರೆ.
ಭಾರತೀಯ ಆಟಗಾರರ ಪೈಕಿ ಶುಭಮನ್ ಗಿಲ್ 5 ನೇ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.























