ಶಿವಮೊಗ್ಗ: ಕೆಎಸ್‌ಸಿಎ ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯಗಳನ್ನು ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿಯವರು ಕಷ್ಟಪಟ್ಟು ಯಾವ ದೃಷ್ಟಿಕೋನ ಇಟ್ಟುಕೊಂಡು ಕ್ರೀಡಾಂಗಣ ಮಾಡಿದರೊ ಅದು ಸದ್ಯಕ್ಕೆ ನಿಂತುಹೋಗಿದೆ. ಮುಂಬರುವ ಅಂತಾರಾಷ್ಟ್ರೀಯ ಪಂದ್ಯ, ಟಿ20 ವಿಶ್ವಕಪ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿಲ್ಲ. ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ನಮ್ಮ ತಂಡ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ತಂಡಕ್ಕಿರುವ ಕ್ರಿಕೆಟ್ ಅಭಿಮಾನಿಗಳು ಬೇರೆ ಯಾವ ತಂಡಕ್ಕೆ ಇಲ್ಲ. ಫ್ರಾಂಚೈಸಿ ಮ್ಯಾಚ್‌ಗಳು ಸಹ ಬೆಂಗಳೂರಿನಿಂದ ಹೊರಹೋಗಬಹುದು. ಇದು ಖಂಡಿತಾ ಅನ್ಯಾಯ. ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ತಮ್ಮ ತಂಡ ಚುನಾವಣೆಯಲ್ಲಿ ಗೆದ್ದರೆ ರಾಜ್ಯದ ಉಳಿದ 5 ಜೋನ್‌ಗಳನ್ನೂ ಅಭಿವೃದ್ಧಿ ಮಾಡುವುದು, ಅಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಪ್ರತಿಭೆಯೇ ಮಾನದಂಡ ಎಂದರು.


























