Home ಕ್ರೀಡೆ ಹರ್ಮಾನ್ ಅರ್ಧಶತಕ: ಟಿ20 ಸರಣಿ ಕ್ಲೀನ್‌ಸ್ವೀಪ್

ಹರ್ಮಾನ್ ಅರ್ಧಶತಕ: ಟಿ20 ಸರಣಿ ಕ್ಲೀನ್‌ಸ್ವೀಪ್

0
1

ತಿರುವನಂತಪುರಂ: 2025ರ ಮಹಿಳಾ ಕ್ರಿಕೆಟ್‌ನಲ್ಲಿ ಹರ್ಮಾನ್‌ಪ್ರೀತ್ ಕೌರ್ ಮುಂದಾಳತ್ವದ ಭಾರತೀಯ ಪಡೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಮೂಲಕ ದಾಖಲೆ ಮಾಡಿದ್ದು, ಈ ವರ್ಷಕ್ಕೆ ಗೆಲುವಿನ ವಿದಾಯ ಹೇಳಿದೆ. 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾ ಪಡೆ ಹೋರಾಟ ನೀಡಿದರೂ, ಗೆಲುವು ಮಾತ್ರ ದಕ್ಕಲಿಲ್ಲ. ಭಾರತದ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಅಮೋಘ 68 ರನ್‌ಗಳ ಅಬ್ಬರದ ಬ್ಯಾಟಿಂಗ್ ಕೊನೆಗೂ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿತು.

ಮೊದಲಿಗೆ ಟಾಸ್ ಗೆದ್ದ ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು ಭಾರತಕ್ಕೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟರು. ಅಚ್ಚರಿಯೆಂದರೆ, ಕಳೆದ ನಾಲ್ಕು ಪಂದ್ಯಗಳಲ್ಲಿ ವಿಕೆಟ್‌ಗಾಗಿ ಪರದಾಡಿದ ಶ್ರೀಲಂಕಾ ಬೌಲರ್‌ಗಳು, ಮಂಗಳವಾರ ಮಾತ್ರ ಭಾರತದ ಟಾಪ್ ಆರ್ಡರ್ ಕೊಡಲಿಪೆಟ್ಟು ನೀಡಿದರು. ಸ್ಫೋಟಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ 5, ಸ್ಮೃತಿ ಮಂಧಾನ 12 ಹಾಗೂ ಹರ್ಲಿನ್ ಡಿಯೋಲ್ 13 ರನ್ ಗಳಿಸಿ ಬಹು ಬೇಗನೇ ಔಟಾದರೆ, ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ 5 ಹಾಗೂ ದೀಪ್ತಿ ಶರ್ಮಾ 7 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನೋಡ ನೋಡುತ್ತಿದ್ದಂತೆ, ಭಾರತ ಕೇವಲ 77 ರನ್‌ಗಳಿಗೆ ಪ್ರಮುಖ ಐವರನ್ನು ಕಳೆದುಕೊಂಡಿತು.

ಹರ್ಮಾನ್ ನಾಯಕಿಯಾಟ: ಭಾರತಕ್ಕೆ ಅಸರೆಯಾದ ನಾಯಕಿ ಹರ್ಮಾನ್‌ಪ್ರೀತ್ ಆರಂಭದಲ್ಲಿ ಸಮಾಧಾನಕರ ಬ್ಯಾಟಿಂಗ್ ನಡೆಸಿದರು. ಹೆಚ್ಚು ಸಮಯ ವ್ಯರ್ಥ ಮಾಡದೇ, ರನ್ ಕದಿಯುತ್ತಾ ಸಾಗಿದ ಈಕೆ, ಅಮನ್ಜೋತ್ ಕೌರ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಇದರಿಂದ, ಭಾರತ 14.2 ಓವರ್‌ಗಳಲ್ಲಿ ನೂರರ ಗಡಿ ತಲುಪಿತು. ಇಲ್ಲಿಂದ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹರ್ಮಾನ್ ಬೌಂಡರಿ, ಸಿಕ್ಸರ್‌ಗಳ ಮೂಲಕ ಅರ್ಧಶತಕವನ್ನೂ ಸಂಪೂರ್ಣಗೊಳಿಸಿದರು. ಕೌರ್ ಜೋಡಿ 35 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವನ್ನೂ ಕಟ್ಟಿದರು. ಆದ್ರೆ, ಈ ಇಬ್ಬರು 5 ಎಸೆತಗಳ ಅಂತರದಲ್ಲಿ ವಿಕೆಟ್ ನೀಡಿದ್ದು ಭಾರತದ ಬೃಹತ್ ಮೊತ್ತದ ಕನಸಿಗೆ ಪೆಟ್ಟು ನೀಡಿತು.

ಸ್ಲಾಗ್ ಓವರ್‌ಗಳಲ್ಲಿ ಅರುಂಧತಿ ರೆಡ್ಡಿ ಮಿಂಚಿನ ಓಟ ನಡೆಸಿದರು. 4 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 11 ಎಸೆತಗಳಲ್ಲಿ 27 ರನ್ ಗಳಿಸಿದ್ದರಿಂದ, ಭಾರತ 170 ರನ್ ಗಡಿ ದಾಟಿತು. ಸ್ನೇಹ್ ರಾಣಾ ಕೂಡ 8 ರನ್ ಕಾಣಿಕೆ ನೀಡಿದ್ದರಿಂದ ಭಾರತ 175 ರನ್‌ಗಳಿಸಿತು.

ನಾಯಕಿ ಚಾಮರಿ ಅಟಪಟ್ಟು 2 ಓವರ್‌ನಲ್ಲೇ ವಿಕೆಟ್ ಕಳೆದುಕೊಂಡರು. ಆದರೆ ಹಸಿನಿ ಪೆರೆರಾ ಹಾಗೂ ಇಮೇಶಾ ಧುಲಾನಿ 79 ರನ್‌ಗಳ ಜೊತೆಯಾಟ ಕಟ್ಟಿದರು. ಅಲ್ಲದೇ ಈ ಇಬ್ಬರು ಕೂಡ ವೈಯಕ್ತಿಕ ಅರ್ಧಶತಕಗಳಿಸಿ ಮಿಂಚಿದರು. ಆದ್ರೆ, ಧುಲಾನಿ ಔಟಾಗುತ್ತಿದ್ದಂತೆ ಪೆರೆರಾ ಮೇಲೆ ಒತ್ತಡ ಹೆಚ್ಚಾಯಿತು. ಇದರಿಂದ, ಲಂಕಾ ರನ್‌ವೇಗ ಕುಸಿದು ಸೋಲಿನ ಕಡೆ ಸಾಗಿತು. ಅಂತಿಮವಾಗಿ ಶ್ರೀಲಂಕಾ 160 ರನ್‌ಗಳಿಸಿ 15 ರನ್‌ಗಳಿಂದ ಸೋಲುಂಡು ನಿರಾಸೆ ಅನುಭವಿಸಿತು.