Home ಕ್ರೀಡೆ IND vs SA:ಹಾರ್ದಿಕ್‌ ಸ್ಫೋಟಕ ಬ್ಯಾಟಿಂಗ್‌, ಭಾರತಕ್ಕೆ ಸರಣಿ ಜಯ

IND vs SA:ಹಾರ್ದಿಕ್‌ ಸ್ಫೋಟಕ ಬ್ಯಾಟಿಂಗ್‌, ಭಾರತಕ್ಕೆ ಸರಣಿ ಜಯ

0
17

ಅಹಮದಾಬಾದ್:‌ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌ ಹಾಗೂ ವರುಣ ಚಕ್ರವರ್ತಿ ಅತ್ಯುತ್ತಮ ಬೌಲಿಂಗ್‌ ನೆರವಿನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ 30 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿ ವಶ ಮಾಡಿಕೊಂಡಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದು, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 231 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿತು.

ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ ಜೋಡಿ 5.4 ಓವರ್‌ಗಳಲ್ಲಿಯೇ 63 ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಈ ವೇಳೆ ಅಭಿಷೇಕ ಶರ್ಮಾ (34) ಕಾರ್ಬಿನ್ ಬಾಷ್ ಎಸೆತದಲ್ಲಿ ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿʼಕಾಕ್‌ಗೆ ಕ್ಯಾಚ್‌ ನೀಡಿ ಔಟಾದರು.
ಇನ್ನೊಂದಡೆ ಅಬ್ಬರಿಸುತ್ತಿದ್ದ ಸಂಜು ಸ್ಯಾಮ್ಸನ್‌(37), ಜಾರ್ಜ್ ಲಿಂಡೆ ಎಸೆತದಲ್ಲಿ ಪೆವಿಲಿಯನ್‌ಗೆ ನಡೆದರು.

ತಿಲಕ್‌ ವರ್ಮಾ ಈ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದು, 42 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ನಿಂದ 73 ರನ್‌ ಗಳಿಸಿದರೆ, ಹಾರ್ದಿಕ್‌ ಪಾಂಡ್ಯ ಕ್ರಿಸ್‌ಗೆ ಬರುತ್ತಿದ್ದಂತೆ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅಂತಿಮವಾಗಿ 25 ಎಸೆತಗಳ್ಲಿ 5 ಬೌಂಡರಿ, 5 ಸಿಕ್ಸರ್‌ಗಳಿಂದ 63 ರನ್‌ಗಳಿಸಿ ಹೊರನಡೆದರು.

232 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟನ್‌ ಡಿʼಕಾಕ್‌ 35 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 65 ರನ್‌ಗಳಿಸಿದರು. ಡೆವಾಲ್ಡ್ ಬ್ರೆವಿಸ್ 17 ಎಸೆತಗಳಲ್ಲಿ 31 ರನ್‌ ಸಿಡಿಸಿ ಔಟಾಗಿದ್ದು ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನೂ 20ರ ಗಡಿ ದಾಟಲಿಲ್ಲ.

ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 3-1 ಅಂತರದಲ್ಲಿ ಸರಣಿ ವಶಮಾಡಿಕೊಂಡಿತು.