ಬೆಂಗಳೂರು: ಕೊನೆಗೂ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ದೊರೆತಿದೆ. ರಾಜ್ಯ ಗೃಹ ಇಲಾಖೆ ಅಧಿಕೃತವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಗೃಹ ಇಲಾಖೆ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗೆ ಒಪ್ಪಿಗೆ ನೀಡಿದ್ದು, ಈ ಮೂಲಕ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿ ಸಿಕ್ಕಂತಾಗಿದೆ.
ಇನ್ನು ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, “ಗೃಹ ಇಲಾಖೆಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿರುವುದು ನಮಗೆ ಸಂತಸ ತಂದಿದೆ” ಎಂದು ತಿಳಿಸಿದ್ದಾರೆ.
ಪಂದ್ಯಾವಳಿ ನಡೆಸಲು ಅನುಮತಿ ನೀಡಿದ್ದರೂ, ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿಗದಿಪಡಿಸಿರುವ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಸುರಕ್ಷತೆ, ಭದ್ರತೆ ಮತ್ತು ಜನಸಂದಣಿ ನಿರ್ವಹಣೆಯ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೆಎಸ್‌ಸಿಎ ಸಿದ್ಧವಾಗಿದೆ ಎಂದು ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.























