ಉತ್ತರಾಖಂಡ: 12 ಕೋಟಿ ರೂಪಾಯಿಗಳ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಉತ್ತರಾಖಂಡ ಹೈಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ನೋಟಿಸ್ ಜಾರಿ ಮಾಡಿದೆ.
ಆಟಗಾರರಿಗೆ ಬಾಳೆಹಣ್ಣುಗಳನ್ನು ಒದಗಿಸಲು ಬರೋಬ್ಬರಿ 35 ಲಕ್ಷ ಖರ್ಚು ಮಾಡಲಾಗಿದೆ ಎಂಬ ಆರೋಪ ಸೇರಿದಂತೆ ಕೇಂದ್ರ ಮಂಡಳಿಯಿಂದ ರಾಜ್ಯ ಘಟಕಕ್ಕೆ ಬಂದ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ತನಿಖೆ ನಡೆಸಬೇಕೆಂದು ಅರ್ಜಿಗಳು ಕೋರಿವೆ. ಹಾಗಾಗಿ, ಅರ್ಜಿ ವಿಚಾರಣೆ ನಡೆಸಿರುವ ಉತ್ತರಾಖಂಡ ಹೈಕೋರ್ಟ್ ಸ್ಪಷ್ಟನೆ ನೀಡಲು ನೋಟಿಸ್ ಜಾರಿಗೊಳಿಸಿದೆ.
ನ್ಯಾ. ಮನೋಜ್ ಕುಮಾರ್ ತಿವಾರಿ ನೇತೃತ್ವದ ಏಕ ಪೀಠವು 2024/35ರ ಉತ್ತರಾಖಂಡ ಕ್ರಿಕೆಟ್ ಸಂಘದ ಲೆಕ್ಕಪರಿಶೋಧನಾ ವರದಿಯ ಕುರಿತು ಸಂಜಯ್ ರಾವತ್ ಮತ್ತು ಇತರರು ಸಲ್ಲಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿತ್ತು. ಸೆಪ್ಟೆಂಬರ್ 19 ವಿಚಾರಣೆಯನ್ನು ನಿಗದಿಪಡಿಸಲಾಗಿದೆ.
`ಕಾರ್ಯಕ್ರಮ ನಿರ್ವಹಣೆಗೆ 6.4 ಕೋಟಿ ರೂ. ಪಾವತಿಸಲಾಗಿದೆ ಮತ್ತು ಪಂದ್ಯಾವಳಿಗಳು ಮತ್ತು ಪ್ರಾಯೋಗಿಕ ವೆಚ್ಚಗಳಿಗಾಗಿ ಒಟ್ಟು 26.3 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಆಡಿಟ್ ವರದಿ ತೋರಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 22.3 ಕೋಟಿ ರೂ.ಗಳಷ್ಟಿತ್ತು. ಆಹಾರ ವೆಚ್ಚದ ಹೆಸರಿನಲ್ಲಿ ಸಂಘವು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ’ ಎಂದು ವರದಿ ಹೇಳುತ್ತದೆ.


























