ಕಟಕ್: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್, ಬೌಲರ್‌ಗಳ ಉತ್ತಮ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ಸುಲಭ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 12.3 ಓವರ್‌ಗಳಲ್ಲಿಯೇ 74 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಆಫ್ರಿಕಾ ಯೋಜನೆ ಉಲ್ಟಾಪಲ್ಟಾ: ಮೊದಲ ಬ್ಯಾಟಿಂಗ್ ಕಳಿಸಲ್ಪಟ್ಟ ಭಾರತಕ್ಕೆ ಆಫ್ರಿಕಾ ಬೌಲರ್‌ಗಳು ಆರಂಭದಲ್ಲಿಯೇ ಆಘಾತ ನೀಡಿದರು. ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಶುಭಮನ್ ಗಿಲ್ ಔಟಾದರು.
ಗಿಲ್ ಹಿಂದೆಯೇ ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ ಕೂಡ ಹೊರನಡೆದರು. ಆದರೆ ಬಳಿಕ ಕ್ರೀಸ್‌ಗೆ ಇಳಿದ ತಿಲಕ್ ವರ್ಮಾ (26), ಅಕ್ಷರ ಪಟೇಲ್ (23) ಉಪಯುಕ್ತ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು.
ಪಾಂಡ್ಯ ಅಬ್ಬರ: 4ನೇ ವಿಕೆಟ್‌ಗೆ ಕ್ರೀಸ್‌ಗೆ ಬಂದ ಹಾರ್ದಿಕ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು. ಕೇವಲ 28 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳು ಸೇರಿದಂತೆ ಅಜೇಯ 59 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಪೆವಿಲಿಯನ್ ಪರೇಡ್: 176 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭದ ಎರಡನೇ ಎಸೆತದಲ್ಲಿಯೇ ಕ್ವಿಂಟನ್ ಡಿʼಕಾಕ್‌ರನ್ನು ಔಟ್ ಮಾಡಿದ ಅರ್ಷದೀಪ್ ಸಿಂಗ್ ಮತ್ತೇ ತಮ್ಮ ಮುಂದಿನ ಓವರ್‌ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಹೊರಕಳಿಸಿದರು.
ಜಸ್ಪ್ರೀತ್ ಬುಮ್ರಾ, ವರುಣ ಚಕ್ರವರ್ತಿ ಮತ್ತು ಅಕ್ಷರ ಪಟೇಲ್ ಕೂಡ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪರಿಣಾಮ ಆಫ್ರಿಕಾ ರನ್ ಗಳಿಸಲು ಪರದಾಡಬೇಕಾಯಿತು.









